ರಾಮಕುಂಜ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ನೇತ್ರಾವತಿ ತುಳುಕೂಟ ರಾಮಕುಂಜ ಇವರ ಸಹಭಾಗಿತ್ವದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಆಶ್ರಯದಲ್ಲಿ ಕಡಬ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ತುಳು ಭಾಷೆ-ಸಂಸ್ಕೃತಿ’ ಕಾರ್ಯಾಗಾರವು ದಿನಾಂಕ 13-07-2024ರಂದು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್ ಇವರು ಮಾತನಾಡಿ, “ತುಳು ಕಲಿಸುವ ಶಾಲೆಗಳ ಸಂಖ್ಯೆ ಹೆಚ್ಚಳ ಆಗಬೇಕು. ಈ ನಿಟ್ಟಿನಲ್ಲಿ ಅನುದಾನಿತ ಹಾಗೂ ಸರಕಾರಿ ಶಾಲೆಗಳಲ್ಲಿ ತುಳು ಅತಿಥಿ ಶಿಕ್ಷಕರ ನೇಮಕ ಮಾಡುವ ಸಂಬಂಧ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಕಾರ್ಯದರ್ಶಿ, ಪ್ರೌಢಶಿಕ್ಷಣ ಸಚಿವರು, ಆಯುಕ್ತರ ಭೇಟಿ ಮಾಡಿ ಮನವಿ ಮಾಡಲಾಗಿದ್ದು, ಇದಕ್ಕೆ ಪೂರಕ ಭರವಸೆ ದೊರೆತಿದೆ. ಇದರ ಜೊತೆಗೆ ತುಳು ಭಾಷೆಯನ್ನು 2ನೇ ಅಧಿಕೃತ ಭಾಷೆಯನ್ನಾಗಿಸುವ ನಿಟ್ಟಿನಲ್ಲೂ ಪ್ರಯತ್ನ ನಡೆಯುತ್ತಿದೆ” ಎಂದರು. ಕಳೆದ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ತುಳು ಪಠ್ಯದಲ್ಲಿ 100 ಪೂರ್ಣ ಅಂಕ ಪಡೆದ ವಿದ್ಯಾರ್ಥಿಗಳಿಗೆ ತುಳು ಅಕಾಡೆಮಿ ವತಿಯಿಂದ ಮಂಗಳೂರಿನ ತುಳು ಭವನದಲ್ಲಿ ಗೌರವಾರ್ಪಣೆ ನಡೆಯಲಿದೆ ಎಂದು ಹೇಳಿದ ತಾರನಾಥ ಗಟ್ಟಿ ಕಾಪಿಕಾಡ್ ಅವರು, ತುಳು ಭಾಷೆಯ ಬಗ್ಗೆ ಕೆ. ಸೇಸಪ್ಪ ರೈ ಅವರ ಕಾಳಜಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿದ್ದ ಕಡಬ ತೆಗ್‌ರ್ ನ ತುಳುಕೂಟದ ಸದಸ್ಯ ಉಮೇಶ್ ಶೆಟ್ಟಿ ಸಾಯಿರಾಂ ಅವರು ಮಾತನಾಡಿ “ತುಳು ಭಾಷೆ ಸಂಸ್ಕೃತಿ, ಆಚಾರ ವಿಚಾರದ ಬಗ್ಗೆ ಪ್ರಾಥಮಿಕ ಶಾಲೆಯ ಹಂತದಲ್ಲಿಯೇ ಮಕ್ಕಳಿಗೆ ತಿಳುವಳಿಕೆ ನೀಡುವ ಕೆಲಸ ಆಗಬೇಕು. ಈ ಬಗ್ಗೆ ಸರಕಾರದ ಮಟ್ಟದಲ್ಲೇ ಆದೇಶ ಬರಬೇಕು. ಮಾತೃಭಾಷೆಯಾಗಿರುವ ತುಳುಭಾಷೆಯ ಬೆಳವಣಿಗೆಗೆ ತುಳುನಾಡಿನ ಎಲ್ಲರೂ ಪ್ರಾಮಾಣಿಕ ಸೇವೆ ಮಾಡಬೇಕು” ಎಂದು ಹೇಳಿದರು.
ಕಾರ್ಯಾಗಾರ ಉದ್ಘಾಟಿಸಿದ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ, ರಾಮಕುಂಜ ನೇತ್ರಾವತಿ ತುಳುಕೂಟದ ಅಧ್ಯಕ್ಷರೂ ಆದ ಕೆ. ಸೇಸಪ್ಪ ರೈಯವರು ಮಾತನಾಡಿ “ಪಿ.ಯು.ಸಿ.ಯಲ್ಲೂ ತುಳು ಪಠ್ಯ ಕಲಿಕೆಗೆ ಅಕಾಡೆಮಿ ವತಿಯಿಂದ ಕ್ರಮ ಕೈಗೊಳ್ಳಬೇಕು. ತುಳು ಕಲಿಕೆಯಿಂದ ವಿದ್ಯಾರ್ಥಿಗಳಿಗೆ ವಿಶೇಷ ಕೋಟಾದಲ್ಲಿ ಮುಂದಿನ ವಿದ್ಯಾಭ್ಯಾಸಕ್ಕೂ ಅನುಕೂಲವಾಗಲಿದೆ. ಎಸ್.ಎಸ್.ಎಲ್.ಸಿ. ಅಂಕಗಳಿಕೆಯಲ್ಲಿ ಶೇಕಡಾವಾರು ಹೆಚ್ಚಳವಾಗಲಿದೆ. ಉದ್ಯೋಗದಲ್ಲೂ ಮೀಸಲಾತಿ ಸಿಗಲಿದೆ. ಪರಿಸರ ಜ್ಞಾನವೂ ಆಗಲಿದೆ” ಎಂದು ಹೇಳಿದರು.
‘ತುಳು ಭಾಷೆ-ಸಂಸ್ಕೃತಿ’ಗೆ ಸಂಬಂಧಿಸಿ ವಿವಿಧ ಗೋಷ್ಠಿಗಳು ನಡೆದವು. ತುಳು ಉಪನ್ಯಾಸಕಿಯಾದ ಮಂಗಳೂರಿನ ಶ್ರೀಮತಿ ಪ್ರಶಾಂತಿ ಶೆಟ್ಟಿ ಇರುವೈಲು ಇವರು ‘ತುಳು ಬಾಸೆದ ಸಾಹಿತ್ಯೊಲು’ ಕುರಿತು, ತುಳು ಸಾಹಿತಿ ಶ್ರೀ ಚಂದ್ರಹಾಸ ಕಣಂತೂರು ಇವರು ‘ತುಳುನಾಡ ಗೊಬ್ಬುಲು’ ಹಾಗೂ ತುಳು ಎಂ.ಎ. ವಿದ್ಯಾರ್ಥಿಯಾದ ಶ್ರೀ ಪ್ರಸಾದ್ ಅಂಚನ್ ಇವರು ‘ತುಳುನಾಡ್ ದ ಪರ್ಬೊಲು’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕಿಶೋರ್, ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಹರೀಶ್ ಬಾರಿಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತುಳು ಶಿಕ್ಷಕಿ ಸರಿತಾ ಜನಾರ್ದನ ಸ್ವಾಗತಿಸಿ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಗಾಯತ್ರಿ ವಂದಿಸಿ, ಶಿಕ್ಷಕಿ ಸಂಚಿತಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕಾರ್ಯಾಗಾರದಲ್ಲಿ ಕಡಬ ತಾಲೂಕಿನ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು.