27 ಫೆಬ್ರವರಿ 2023, ಮಂಗಳೂರು: “ಸಾನಿಧ್ಯ ವಸತಿಯುತ ಶಾಲೆ ರಾಜ್ಯಕ್ಕೆ ಮಾದರಿ”
“ಮಂಗಳೂರಿನ ಸಾನಿಧ್ಯ ವಸತಿಯುತ ಶಾಲೆ ರಾಜ್ಯಕ್ಕೆ ಮಾದರಿ ಎನಿಸುವ ರೀತಿಯಲ್ಲಿ ಕಾರ್ಯಕ್ರಮ ನಿರ್ವಹಿಸುತ್ತಿದೆ. ಇಲ್ಲಿನ ವಿಶೇಷ ಮಕ್ಕಳು ಸಾಮಾನ್ಯ ಮಕ್ಕಳಿಗಿಂತಲೂ ಶ್ರೇಷ್ಠವಾದ ಸಾಂಸ್ಕೃತಿಕ ಪ್ರತಿಭೆಯನ್ನು ಪ್ರದರ್ಶಿಸಿರುವುದು ಅಭಿನಂದನೀಯ. ಇದೇ ರೀತಿಯಲ್ಲಿ ರಾಜ್ಯದ ಎಲ್ಲಾ ವಿಶೇಷ ಶಾಲೆಗಳು ಕಾರ್ಯ ನಿರ್ವಹಿಸಬೇಕು” ಎಂದು ಖ್ಯಾತ ವೈದ್ಯರು ಹಾಗೂ ದಕ್ಷಿಣ ಕನ್ನಡ ಗ್ರಹರಕ್ಷಕ ದಳದ ಕಮಾಂಡೆಂಟ್ ಆಗಿರುವ ಡಾ. ಮುರಳಿ ಮೋಹನ್ ಚುಂತಾರು ಹೇಳಿದರು. ಮಂಗಳೂರಿನ ಕದ್ರಿ ಉದ್ಯಾನದಲ್ಲಿ ಫೆಬ್ರವರಿ 25-26ರಂದು ಜರುಗಿದ “ಸಾನಿಧ್ಯಉತ್ಸವ” ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಮುರಳಿ ಮೋಹನ್ ಚುಂತಾರು ವಿಶೇಷ ಮಕ್ಕಳ ಜೊತೆ ಬಲೂನು ಹಾರಿಸುವ ಮೂಲಕ ನಡೆಸಿಕೊಟ್ಟರು. QEDHR ಕನ್ಸಲ್ಟಿಂಗ್ ಕಂಪೆನಿಯ ಸಂಸ್ಥಾಪಕರು ಹಾಗೂ ಮುಖ್ಯಕಾರ್ಯ ನಿರ್ವಾಹಣಾಧಿಕಾರಿಯಾಗಿರುವ ಶ್ರೀಮತಿ ಸುಚಿತ್ರ ರಾಜೇಂದ್ರರವರು ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದರು. ಟೆಥೆರ್ಫಿ ಸಂಸ್ಥೆಯ ಶ್ರೀಮತಿ ಜ್ಯೋತಿಕಾ ಆಳ್ವ, ಲಕ್ಷ್ಮಣ್ ಶೆಣೈ ಹಾಗೂ ಶ್ರೀಮತಿ ಶ್ರೀಜಾ ಇವರು ಸಾನಿಧ್ಯಕ್ಕಾಗಿ ನಿರ್ಮಿಸಿದ “ರೇ ಆಫ್ ಹೋಪ್” ಎಂಬ ಸಾನಿಧ್ಯ ಕೈಪಿಡಿಯನ್ನು ಶ್ರೀಮತಿ ಸುಚಿತ್ರ ರಾಜೇಂದ್ರರವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮೈಸೂರಿನ ಉದ್ಯಮಿ ಶ್ರೀ ಹರ್ಷ ಮೆಲಾಂಟ ಹಾಗೂ ಮಂಗಳೂರಿನ ಸಂತೋಷ್ ಎರೆಂಜರ್ಸ್ ನಿರ್ದೇಶಕರಾದ ಶ್ರೀ ಸಂತೋಷ್ ಸಿಕ್ವೇರಾರವರನ್ನು ಸನ್ಮಾನಿಸಲಾಯಿತು.
“ಸಾನಿಧ್ಯ”ದ ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕುಂಭಕರ್ಣನನ್ನು ಗಾಢ ನಿದ್ರೆಯಿಂದ ಎಬ್ಬಿಸಲ್ಪಡುವ “ನಾಗಾಸ್ತ್ರ – ಕುಂಭಕರ್ಣ ಕಾಳಗ” ಎಂಬ ಅದ್ಬುತ ಯಕ್ಷಗಾನ, ನಯನ ಮನೋಹರ ಸಮೂಹ ನೃತ್ಯ, “ಕಲ್ಲುರ್ಟಿ ಕಲ್ಕುಡ” ಎಂಬ ದೈವಾರಾಧನೆ ಹಾಗೂ ಭಕ್ತಿಪ್ರಧಾನವಾದ ನಾಟಕವನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿದರು.
ಸಮಾರಂಭದ ಒಂದು ಭಾಗವಾದ “ವಿಷನ್ – 2023” ಕರಕುಶಲ ವಸ್ತುಗಳ ಪ್ರದರ್ಶನವು ಫೆಬ್ರವರಿ ತಿಂಗಳ 25ನೇ ತಾರೀಖು ಶನಿವಾರದಂದು ನಡೆಯಿತು.ಈ ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿರುವ ಡಾ.ಕುಮಾರ ಭಾ.ಆ.ಸೇ. ಇವರು ನೆರವೇರಿಸಿ “ಸಾನಿಧ್ಯ”ದ ಕಾರ್ಯವೈಖರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿ ಪ್ರೋತ್ಸಾಹಿಸಿದರು.
“ಸಾನಿಧ್ಯ”ದ ಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಹಾಗೂ ಆಸಕ್ತಿಯಿಂದ ಶಿಕ್ಷಕರ ಮಾರ್ಗದರ್ಶನದೊಂದಿಗೆ ತಮ್ಮ ಸತತ ಪ್ರಯತ್ನದಿಂದ ತಯಾರಿಸಿದ ಹಲವಾರು ಬಗೆಯ ವೈವಿಧ್ಯಮಯ ವರ್ಣರಂಜಿತ ವಸ್ತುಗಳಾದ ಹೂದಾನಿಗಳು, ಹೂವುಗಳು, ಕ್ಯಾನ್ವಾಸ್ ಪೈಯಿಂಟಿಂಗ್, ಆಕರ್ಷಕ ಕಿವಿಯೋಲೆ ಹಾಗೂ ಬ್ರೆಸ್‌ಲೆಟ್‌ಗಳು, ಕಾಲ್ಗೆಜ್ಜೆ, ಕೀಬಂಚ್‌ಗಳು, ಹ್ಯಾಂಡ್ ಬ್ಯಾಗ್‌ಗಳು, ಮಿನಿ ಪರ್ಸ್ ಗಳು, ಗೊಂಬೆಗಳು, ಯಕ್ಷಗಾನ ಕಿರೀಟ, ಟೇಬಲ್ ಮ್ಯಾಟ್ ಹಾಗೂ ಬೆಡ್ ಶೀಟ್, ತಲೆದಿಂಬು ಹಾಗೂ ಅದರಕವರ್ ಗಳು, ಏಪ್ರಾನ್, ರುಚಿಕರ ಹೋಮ್‌ಮೇಡ್ ಚಾಕ್‌ಲೇಟ್ಸ್, ಫಿನಾಯಿಲ್, ಕ್ಯಾಂಡಲ್ಸ್ ಹಾಗೂ ಆಡಿನ ಗೊಬ್ಬರ ಮುಂತಾದ ವಸ್ತುಗಳ ಪ್ರದರ್ಶನ ಉತ್ತಮ ರೀತಿಯಲ್ಲಿ ನಡೆಯಿತು. ಉದ್ಯಾನಕ್ಕೆ ಭೇಟಿ ನೀಡಿದ ಜನತೆ, ಅಭಿಮಾನಿಗಳು, ವಿದ್ಯಾರ್ಥಿಗಳ ಪೋಷಕರು, ಶಾಲಾ ಹಿತೈಷಿಗಳು ಈ ಕರಕುಶಲ ವಸ್ತುಗಳ ಪ್ರದರ್ಶನದಲ್ಲಿ ಅನೇಕ ವಸ್ತುಗಳನ್ನು ಕೊಂಡುಕೊಳ್ಳುವ ಮೂಲಕ ತಮ್ಮ ಮನ:ಪೂರ್ವಕ ಸಹಕಾರವನ್ನು ನೀಡಿದರು. ಅಂತೆಯೇ ವಸ್ತು ಪ್ರದರ್ಶನದ ಬಗ್ಗೆ ಶ್ಲಾಘನೀಯ ಮಾತುಗಳನ್ನಾಡಿ “ಸಾನಿಧ್ಯ”ದ ಮೇಲೆ ಅವರಿಗಿರುವ ಪ್ರೀತಿ, ಅಭಿಮಾನವನ್ನು ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಸಾರ್ವಜನಿಕ ಎಚ್ಚರ ಮೂಡಿಸಿದ ಈ ಎರಡು ದಿನದ ಕಾರ್ಯಕ್ರಮದಲ್ಲಿ ಸುಮಾರು ಸಾವಿರಕ್ಕೂ ಮಿಕ್ಕಿ ಸಾರ್ವಜನಿಕರು ಆಗಮಿಸಿ, ಭಿನ್ನ ಸಾಮರ್ಥ್ಯದ ಮಕ್ಕಳಲ್ಲೂ ಸಾಮಾನ್ಯರಿಗಿಂತಲೂ ಮಿಗಿಲಾದ ಪ್ರತಿಭೆ ಇದೆ ಎಂಬುವುದನ್ನು ಮನಸಾರೆ ಅರಿತುಕೊಂಡರು. ಮಾನಸಿಕ ಭಿನ್ನ ಸಾಮರ್ಥ್ಯವುಳ್ಳವರ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ತಕ್ಕುದಾದ ತರಬೇತಿಯನ್ನು ನೀಡಿದಲ್ಲಿ ಭಿನ್ನ ಸಾಮರ್ಥ್ಯದವರು ಮುಖ್ಯವಾಹಿನಿಗೆ ಸೇರುವಲ್ಲಿ ಯಾವುದೇ ಅಡೆತಡೆಗಳು ಇರದು ಎಂಬ ರೀತಿಯಲ್ಲಿ ಸಾನಿಧ್ಯ ವಸತಿ ಶಾಲೆ ಸೇವೆ ನಿರ್ವಹಿಸುತ್ತಿದೆ ಎಂಬುವುದು ಅಕ್ಷರಶ: ನಿಜ.