ಸುರತ್ಕಲ್ : ಪಣಂಬೂರು ನಾಗರಿಕ ಸನ್ಮಾನ ಸಮಿತಿಯ ನೇತೃತ್ವದಲ್ಲಿ ಯಕ್ಷಗಾನ ಹಿಮ್ಮೇಳ ಕಲಾವಿದ ಸುರೇಶ್ ಕಾಮತ್ ಇವರ 60ನೇ ಜನ್ಮ ದಿನಾಚರಣೆ ಪ್ರಯುಕ್ತ ಕುಳಾಯಿ ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ದಿನಾಂಕ 20-07-2024ರಂದು ನಾಗರಿಕ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪಣಂಬೂರು ಕೇಂದ್ರೀಯ ವಿದ್ಯಾಲಯದ ನಿವೃತ್ತ ಅಧ್ಯಾಪಕ ಎಸ್. ಈಶ್ವರ ಭಟ್ “ಹಲವಾರು ದಶಕಗಳಿಂದ ಯಕ್ಷಗಾನ ಹಿಮ್ಮೇಳ ಕಲಾವಿದರಾಗಿರುವ ಪಣಂಬೂರು ಸುರೇಶ್ ಕಾಮತ್ ಅಪರೂಪದ ಕಲಾಸಾಧಕ. ಯಕ್ಷಗಾನ ಕಲಿಕೆ ತಂಡಗಳಿಗೂ ಅವರಂತಹ ಸವ್ಯಸಾಚಿಗಳ ಸಹಕಾರ ಔಚಿತ್ಯಪೂರ್ಣ” ಎಂದು ಅಭಿಪ್ರಾಯಪಟ್ಟರು.
ನವ ಮಂಗಳೂರು ಬಂದರು ಯಕ್ಷಗಾನ ಕಲಾ ಮಂಡಳಿ ಅಧ್ಯಕ್ಷ ಕೆ. ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿಷ್ಣುಮೂರ್ತಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಕೆ. ಕೃಷ್ಣ ಹೆಬ್ಬಾರ್, ವಿಷ್ಣುಮೂರ್ತಿ ಭಜನಾ ಮಂಡಳಿ ಅಧ್ಯಕ್ಷ ಎಂ. ಸದಾಶಿವ, ಸರ್ಜನ್ ಡಾ. ಪಿ. ಸತ್ಯಮೂರ್ತಿ ಐತಾಳ್ ಶುಭ ಹಾರೈಸಿದರು. ನಾಗರಿಕ ಸನ್ಮಾನ ಸಮಿತಿಯ ಎಂ. ಶಂಕರನಾರಾಯಣ ನಿರೂಪಿಸಿ, ಕೆ.ಪಿ. ಚಂದ್ರಶೇಖರ್ ಸ್ವಾಗತಿಸಿ, ಎಸ್.ಎನ್. ಭಟ್ ಬಾಯಾರು ಸನ್ಮಾನ ಪತ್ರ ವಾಚಿಸಿದರು. ಅಭಿಮಾನಿಗಳಿಂದ, ಸಂಘ ಸಂಸ್ಥೆಗಳಿಂದ ಗೌರವಾರ್ಪಣೆ ನಡೆಯಿತು. ಯೋಗೀಶ್ ಸನಿಲ್ ಕುಳಾಯಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪಣಂಬೂರು ವೆಂಕಟ್ರಾಯ ಐತಾಳ ಯಕ್ಷಗಾನ ಅಧ್ಯಯನ ಕೇಂದ್ರದ ಮಕ್ಕಳ ಮೇಳದ ವಿದ್ಯಾರ್ಥಿಗಳಿಂದ ‘ಶಿವಭಕ್ತಿ’ ಯಕ್ಷಗಾನ ಪ್ರದರ್ಶನಗೊಂಡಿತು.