ಮೂಡುಬಿದಿರೆ: ಆಮ್ನಾಯ ಯಕ್ಷ ಸಂಸ್ಕೃತಿ ಬಳಗ ಗಾಳಿಮನೆ ಸಂಘಟನೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಆಯೋಜಿಸಿದ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅನುಸ್ಕೃತಿ ಮತ್ತು ಕುಂಬ್ಳೆ ಶ್ರೀಧರ ರಾವ್ ನುಡಿನಮನ ಕಾರ್ಯಕ್ರಮವು ದಿನಾಂಕ 20-07-2024ರ ಶನಿವಾರದಂದು ಮೂಡುಬಿದಿರೆಯ ಸಂಪಿಗೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಯಕ್ಷಗಾನ ವಿದ್ವಾಂಸ ಡಾ. ಪ್ರಭಾಕರ ಜೋಶಿ ಮಾತನಾಡಿ “ಯಕ್ಷಗಾನ ಕಲೆ ಹಾಗೂ ಕಲಾವಿದರನ್ನು ಕರಾವಳಿಗೆ ಸೀಮಿತಗೊಳಿಸುವುದು ಸಲ್ಲದು. ಯಕ್ಷಗಾನ ಪ್ರಸಂಗ ಸಾಹಿತ್ಯ, ಆಶು ಮಾತುಗಾರಿಕೆ, ಹಾಡುಗಾರಿಕೆ ಇವೆಲ್ಲವನ್ನೂ ಇಡಿಯ ಕನ್ನಡ ನಾಡಿನ ಸಾಹಿತ್ಯ, ಸಂಗೀತ ರಂಗಗಳ ಸಂದರ್ಭ ಸಮಾನವಾಗಿ ಪರಿಗಣಿಸಬೇಕಾಗಿದೆ.” ಎಂದು ಅಭಿಪ್ರಾಯಪಟ್ಟರು.
ಆಮ್ನಾಯ ಯಕ್ಷ ಸಂಸ್ಕೃತಿ ಬಳಗದ ಸಂಸ್ಥಾಪಕ ಡಾ. ವಿದ್ವಾನ್ ವಿನಾಯಕ ಭಟ್ಟ ಗಾಳಿಮನೆ ಮಾತನಾಡಿ “ಕುಂಬ್ಳೆ ಶ್ರೀಧರ ರಾವ್ ಇವರು ಭಾವುಕ, ಸರಳ, ಹೃದ್ಯ ಮಾತುಗಾರಿಕೆಯ ಹಾಗೂ ನಾಟಕೀಯತೆ ಇಲ್ಲದ ಪ್ರಸ್ತುತಿಯ ಕಲಾವಿದ. ಎಲ್ಲರನ್ನೂ ತನ್ನವರೆಂದು ಬಗೆವ ಗುಣದವರಾಗಿದ್ದರು.” ಎಂದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ ಅವರು ಸುಬ್ರಹ್ಮಣ್ಯ ಧಾರೇಶ್ವರರೊಂದಿಗಿನ ಸಂಸರ್ಗ ಸ್ಮರಿಸಿಕೊಂಡು “ ಧಾರೇಶ್ವರರದು ಅದ್ಭುತ ಗಾಯನ, ಸಹೃದಯಶೀಲ ವ್ಯಕ್ತಿತ್ವ.” ಎಂದರು. ಇದೇ ಸಂದರ್ಭದಲ್ಲಿ ತಲ್ಲೂರು ಶಿವರಾಮ ಶೆಟ್ಟಿ ಇವರನ್ನು ಸಮ್ಮಾನಿಸಲಾಯಿತು. ಉದ್ಯಮಿ ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಎಂ. ಸಿ. ಎಸ್. ಸೊಸೈಟಿ ವಿಶೇಷ ಸಿ. ಇ. ಒ. ಚಂದ್ರಶೇಖರ ಎಂ. ಮುಖ್ಯ ಅತಿಥಿಗಳಾಗಿದ್ದರು. ಶ್ರೀ ದುರ್ಗಾ ಜ್ಯೋತಿಷ್ಯಾಲಯದ ಡಾ. ಯೋಗಿ ಪಿ. ಸುಧಾಕರ ತಂತ್ರಿ ಸ್ವಾಗತಿಸಿ, ಯಕ್ಷಗಾನ ಕವಿ ಪ್ರದೀಪ ಹೆಬ್ಬಾರ್ ಪ್ರಸ್ತಾವನೆಗೈದು, ಸದಾಶಿವ ನಿರೂಪಿಸಿ, ಡಾ. ವಿನಾಯಕ ಭಟ್ಟ ಅವರು ಮೈಸೂರಿನ ದೀಪಕ ಭಟ್ಟ ಅವರು ಮಂದಾಕ್ರಾಂತ ವೃತ್ತದಲ್ಲಿ ವಿರಚಿಸಿದ ಕಾವ್ಯಮಯ ಸಂದೇಶ ವಾಚಿಸಿ, ವಂದಿಸಿದರು. ಸುಬ್ರಹ್ಮಣ್ಯ ಧಾರೇಶ್ವರ ಮತ್ತು ಕುಂಬ್ಳೆ ಶ್ರೀಧರ ರಾವ್ ಇವರುಗಳ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈಯಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ಗೋಪಾಲಕೃಷ್ಣ ಭಟ್ಟ ವಿರಚಿತ ತಾಳಮದ್ದಳೆಯಲ್ಲಿ ಅಪರೂಪವಾಗಿರುವ ಆಖ್ಯಾನವಾದ ‘ಕವಿರತ್ನ ಕಾಳಿದಾಸ’ ಪ್ರಸಂಗದ ತಾಳಮದ್ದಳೆ ಪ್ರಸ್ತುತಗೊಂಡಿತು. ಕಲಾವಿದರಾಗಿ ಶಿವಶಂಕರ ಭಟ್ಟ, ರಾಘವೇಂದ್ರ ಹೆಗಡೆ, ಶಿವಾನಂದ ಕೋಟಿ, ಡಾ. ಪ್ರಭಾಕರ್ ಜೋಶಿ, ಸುಧಾಕರ ತಂತ್ರಿ, ವಿ. ವೆಂಕಟರಮಣ, ಕೃಷ್ಣಮೂರ್ತಿ ಮಾಯಣ, ಸದಾಶಿವ, ಪ್ರದೀಪ ಹೆಬ್ಬಾರ್ ಭಾಗವಹಿಸಿದ್ದರು.