ಮೈಸೂರು : ಸಮತಾ ಅಧ್ಯಯನ ಕೇಂದ್ರದಿಂದ ವಿಜಯಾ ದಬ್ಬೆ ಸ್ಮರಣಾರ್ಥ ನಡೆಸಿದ ಕಾವ್ಯ ಹಾಗೂ ಪ್ರಬಂಧ ಸ್ಪರ್ಧೆಗಳ ಬಹುಮಾನ ವಿಜೇತರಿಗೆ ದಿನಾಂಕ 20-07-2024ರಂದು ಸರಸ್ವತಿಪುರಂನ ಮಾನಸ ಗಂಗೋತ್ರಿಯ ಯೂತ್ ಹಾಸ್ಟೆಲ್‌ನಲ್ಲಿ ಆಯೋಜಿಸಿದ್ದ ‘ಕಾವ್ಯ ಮತ್ತು ಪ್ರಬಂಧ ಕಮ್ಮಟ’ವು ಯುವ ಬರಹಗಾರರಿಗೆ ಮಾರ್ಗದರ್ಶನ ನೀಡುವಲ್ಲಿ ಯಶಸ್ವಿಯಾಯಿತು. ಅನಿಸಿದ್ದನ್ನು ಅನುಭವಿಸಿದ್ದನ್ನು ಸಾಹಿತ್ಯದ ಮೂಲಕ ಹೇಳುವ ಧೈರ್ಯವನ್ನು ಬೆಳೆಸಿಕೊಳ್ಳಲು ಬೇಕಾದ ಶಕ್ತಿಯನ್ನು ತುಂಬಿತು.
ಕಾವ್ಯವೆಂದರೆ ಹೀಗೇ ಇರಬೇಕು ಎಂಬ ಚೌಕಟ್ಟಿಲ್ಲ. ಹೊಸದಾಗಿ ಕಟ್ಟುತ್ತಾ ಹೋಗಬೇಕು. ತವಕ-ತಲ್ಲಣ-ಭಾವನೆಗಳನ್ನು ಪರಿಣಾಮಕಾರಿಯಾಗಿ ಕಟ್ಟಿ ಕೊಡಬೇಕು. ಬರೆಯಬೇಕು, ವಿಮರ್ಶೆಯನ್ನು ಓದುಗರು ಹಾಗೂ ಸಮಾಜಕ್ಕೆ ಬಿಟ್ಟು ಬಿಡಬೇಕು ಎಂಬುದು ಯುವ ಕವಿಗಳು ಹಾಗೂ ಕವಯತ್ರಿಯರಿಗೆ ‘ಕಾವ್ಯ ಸಮಯ’ದಲ್ಲಿ ಕವಯತ್ರಿಯರಿಂದ ಬಂದ ಸಲಹೆಗಳಿವು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕವಯತ್ರಿ ಎಚ್.ಆರ್. ಸುಜಾತಾ ಮಾತನಾಡಿ, “ಸಾಹಿತ್ಯದ ಓದು ಎನ್ನುವುದು ನಮ್ಮ ಒಳಗು-ಹೊರಗಿನ ಮತ್ತು ಸಮಾಜದ ಒಳಗೂ ಇರುವ ಹೊಂದಾಣಿಕೆ. ನಮ್ಮ ಬರಹಕ್ಕೂ-ಓದುಗರ ತಿಳಿವಳಿಕೆಗೂ ಸಾಮ್ಯತೆ ಕಂಡುಬಂದಲ್ಲಿ ಒಂದು ಗುರುತು ಉಳಿಯುತ್ತದೆ. ಮರೆಯಲಾಗದ ಕೆಲವು ಚಿತ್ರಣಗಳು ನಮ್ಮ ಕಾಲಗಳನ್ನು ದಾಟಿ ನಮ್ಮೊಳಗೆ ಉಳಿದಿರುತ್ತವೆ. ಅದನ್ನು ದಾಟಿಸುವ ಕ್ರಿಯೆಯಾಗಿ ಸಾಹಿತ್ಯ ರೂಪುಗೊಳ್ಳುತ್ತದೆ. ಇದಕ್ಕಾಗಿ ನೆನಪಿನ ಖಜಾನೆಯನ್ನು ಯಾವಾಗಲೂ ಉಳಿಸಿಕೊಂಡಿರಬೇಕು. ಮನುಷ್ಯನ ನೆನಪುಗಳನ್ನು ವರ್ತಮಾನವೆಂದು ಅಳಿಸಲಾಗುವುದಿಲ್ಲ. ಸೃಜನಾತ್ಮಕ ಚಟುವಟಿಕೆಗಳು ಹಿಂದಿನದ್ದನ್ನು ತಿರುತಿರುಗಿ ನೋಡುತ್ತಲೇ ವರ್ತಮಾನವನ್ನು ಕೂಡ ಹಳೆಯದಾಗಿಸುತ್ತದೆ. ಕವಿಯಾದವರಿಗೆ ಈ ಎಚ್ಚರ ಇರಬೇಕು. ನಾನೂ ಹದಿಹರೆಯದಲ್ಲೇ ಕವಿತೆ ಬರೆಯಲು ಶುರು ಮಾಡಿದೆ. ದೇವನೂರ ಮಹಾದೇವ, ಕುವೆಂಪು ಮೊದಲಾದವರು ನನ್ನ ಮೇಲೆ ಬೀರಿದ ಪ್ರಭಾವ ದೊಡ್ಡದು. ಪದವಿಯಲ್ಲಿದ್ದಾಗ ಪ್ರಬಂಧ ಹಾಗೂ ಕವನ ಬರೆಯಲು ಆರಂಭಿಸಿದೆ. ಓದಿದ್ದು ಬಿ.ಎಸ್ಸಿ ಅದರೂ, ವಿಜ್ಞಾನ ಮರೆತು ಹೋಗಿ ಸಾಹಿತ್ಯವು ಮನಸ್ಸಿನಲ್ಲಿ ಉಳಿದುಬಿಟ್ಟಿದೆ” ಎಂದು ಹೇಳಿದ ಅವರು ತಮ್ಮ ಕೆಲವು ಕಾವ್ಯಗಳನ್ನು ವಾಚಿಸಿ, ಅವು ಹುಟ್ಟಿದ ಬಗ್ಗೆ ವಿವರಿಸಿದರು. “ಕಾವ್ಯವೆಂದರೆ ಅದೊಂದು ದೊಡ್ಡ ಹುಡುಕಾಟ. ಬರೆಯುವುದು, ತಿದ್ದುವುದು ಮೊದಲಾದ ಹುಡುಕಾಟದ ತಾಕಲಾಟದಲ್ಲೇ ಕಾವ್ಯ ಹುಟ್ಟುತ್ತದೆ” ಎಂದು ಹೇಳಿದರು.
ಕವಯತ್ರಿ ಮೌಲ್ಯ ಸ್ವಾಮಿ ಮಾತನಾಡಿ, “ಕವಿತೆ ಅಮೂರ್ತವಾದುದು. ಅದೊಂದು ಮಾಧ್ಯಮ. ಅನುಭವ ಹಾಗೂ ಅನುಭಾವದ ನಡುವಿನ ಸಂವೇದನೆ ಕಟ್ಟಿಕೊಡುವುದೇ ಕವಿತೆ. ವಿಷಯ, ಸಮಾಜ, ಓದುಗರು ಹೀಗೆ… ಎಲ್ಲವೂ ಹಳೆಯದೇ ಇರಬಹುದು. ಆದರೆ, ಸಾಹಿತ್ಯದ ಭಾಷೆಯಲ್ಲಿ ತಾಜಾತನವನ್ನು ಕಟ್ಟಿಕೊಡುವುದು ಮಹತ್ವದ್ದಾಗುತ್ತದೆ. ಅದು ಚೌಕಟ್ಟಿನಿಂದ ಹೊರಗೆ ನಿಂತು ನೋಡಿದಾಗ ಆಗುತ್ತದೆ. ಓದಿದವರು ಏನೆಂದುಕೊಂಡಾರೋ ಎಂದು ನಮ್ಮೊಳಗಿನ ಭಾವನೆಗಳನ್ನು ದಾಖಲಿಸದಿದ್ದರೆ ಅದು ಕವಿತೆಗೆ ಮಾಡುವ ಮೋಸವಾಗುತ್ತದೆ. ಓದುವುದು ಹವ್ಯಾಸವಲ್ಲ. ಅದು ಜೀವನ ಕ್ರಮವಾಗಬೇಕು. ಓದಿನಿಂದಲೇ ಕವಿತೆ ಬರುತ್ತದೆಯೇ? ನನ್ನ ಪ್ರಕಾರ, ಅನುಭವಗಳಿಗೆ ತೆರೆದುಕೊಂಡಾಗ ಕವಿತೆ ಹುಟ್ಟುತ್ತದೆ. ಅದಕ್ಕಾಗಿ ಜೀವ- ಭಾವ- ಬುದ್ದಿ ಎಲ್ಲವೂ ಸೇರಬೇಕು. ಒಳಗಿನ ಗದ್ದಲ- ಹೊರಗಿನ ಗದ್ದಲದ ನಡುವಿನ ಮೌನವೇ ಕವಿತೆಯಾಗಿ ಹುಟ್ಟುತ್ತದೆ. ಕವಿತೆಗೆ ಒಂದು ರೂಪಕ ಬೇಕು ಎಂದು ಬಲವಾಗಿ ನಂಬಿದ್ದೇನೆ. ಕವಿತೆ ಬರೆಯಲು ನಮ್ಮನ್ನು ನಾವು ಓದಿಕೊಳ್ಳಬೇಕು. ಓದುಗರನ್ನು ಗುರಿಯಾಗಿಟ್ಟುಕೊಂಡು ಬರೆಯಬಾರದು. ಉಸಿರಾಡುವುದಕ್ಕೆ ಕಷ್ಟವಾದಾಗ ಬರೆದವಳು ನಾನು. ಕವಿತೆ ನಮ್ಮ ಕನ್ನಡಿ. ಅದರ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿಕೊಳ್ಳುವಂತಹ ಶಕ್ತಿಯನ್ನು ನಾವು ಪಡೆದುಕೊಳ್ಳಬೇಕು” ಎಂದು ಹೇಳಿದರು.
ಕೇಂದ್ರದ ಕಾರ್ಯದರ್ಶಿ ಆರ್. ಸುನಂದಮ್ಮ ಸಮನ್ವಯ ಮಾಡಿದರು. ನಂತರ ಎರಡು ಗೋಷ್ಠಿಗಳು ನಡೆದವು. ಸಮತಾ ಅಧ್ಯಯನ ಕೇಂದ್ರದ ಅಧ್ಯಕ್ಷೆ ಸಬಿಹಾ ಭೂಮಿಗೌಡ, ಸಹ ಕಾರ್ಯದರ್ಶಿ ಪಿ. ಓಂಕಾರ್ ಪಾಲ್ಗೊಂಡಿದ್ದರು.