ಹುಬ್ಬಳ್ಳಿ : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲೆಯ ಅಧ್ಯಕ್ಷರಾಗಿ ಸಾಹಿತಿ ಹಾಗೂ ಪತ್ರಕರ್ತ ವಿರಾಜ್ ಅಡೂರು ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘಟನೆಯ ಕರ್ನಾಟಕ ರಾಜ್ಯ ಸಂಚಾಲಕರಾದ ಕೃಷ್ಣಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ.
ವಿರಾಜ್ ಅಡೂರು ಅವರು ಕಾಸರಗೋಡು ಜಿಲ್ಲೆಯ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಕ್ರಿಯಾಶೀಲರಾಗಿದ್ದಾರೆ. ಇವರು ಬರೆದ ಚುಟುಕುಟುಕು, ಬಾನುಲಿಯಿತು, ನಗಿಸುವ ಚಿತ್ರಗಳು, ಗಾದೆ ಗಮ್ಮತ್ತು (ನಾಲ್ಕು ಭಾಗಗಳಲ್ಲಿ), ಉಪನಯನ ಮೊದಲಾದ ಕೃತಿಗಳು ಪ್ರಕಟಗೊಂಡಿವೆ. ಇವರಿಗೆ ಕೇರಳ ರಾಜ್ಯ ಮಟ್ಟದ ಮಾಧ್ವ ಬ್ರಾಹ್ಮಣ ‘ಅತ್ಯುತ್ತಮ ಚಿತ್ರ ಕಲಾವಿದ’ ಪ್ರಶಸ್ತಿ, ಕಾಸರಗೋಡಿನ ಕನ್ನಡ ಭವನದ ‘ಕನ್ನಡ ಪಯಸ್ವಿನಿ’ ಪ್ರಶಸ್ತಿ, ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದಿಂದ ‘ಗಡಿನಾಡ ಚೈತನ್ಯ’ ಪ್ರಶಸ್ತಿ, ಕೋಟೆಗದ್ದೆ ಸೀತಾರಾಮ ಅಡಿಗ ಸ್ಮಾರಕ ‘ಪಾಶುಪತ ಸಾಹಿತ್ಯ ಪ್ರಶಸ್ತಿ’ ಸಹಿತ ಅನೇಕ ಪ್ರಶಸ್ತಿಗಳು ದೊರೆತಿವೆ. ಕೃಷಿ, ಶಿಕ್ಷಣ, ಸಾಹಿತ್ಯ, ವ್ಯಂಗ್ಯಚಿತ್ರ ರಚನೆ, ಮಕ್ಕಳ ಶಿಬಿರ ಸಂಯೋಜನೆ, ಮಕ್ಕಳ ಶಿಬಿರ ಸಂಪನ್ಮೂಲ ವ್ಯಕ್ತಿಯಾಗಿ ಕ್ರಿಯಾಶೀಲರಾಗಿದ್ದಾರೆ. ಇವರು ರಚಿಸಿದ ಸುಮಾರು 2000 ವ್ಯಂಗ್ಯಚಿತ್ರಗಳು, 500ರಷ್ಟು ಲೇಖನಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.