ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಹರೀಶ್ ಟಿ.ಜಿ. ಇವರ ‘ಉದ್ದ ಲಂಗದ ಕಾಲೇಜು ದಿನಗಳು’ ಪುಸ್ತಕದ ಲೋಕಾರ್ಪಣಾ ಸಮಾರಂಭವು 23 ಜುಲೈ 2024ರಂದು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ “ಸಾಹಿತ್ಯ ಕೃತಿಗಳು ಬಿಡುಗಡೆಗೊಂಡು ವಿದ್ಯಾರ್ಥಿಗಳು ಸ್ಫೂರ್ತಿಗೊಳಗಾಗುವಂತೆ, ಸಂಶೋಧನಾ ಕೃತಿಗಳೂ ಬಿಡುಗಡೆಗೊಂಡು ವಿದ್ಯಾರ್ಥಿಗಳು ಪ್ರೇರಣೆಗೊಳಗಾಗಬೇಕು.” ಎಂದು ಅಭಿಪ್ರಾಯಪಟ್ಟರು. ನಾವು ಅನೇಕ ಸಂಕ್ರಮಣ ಕಾಲಘಟ್ಟವನ್ನು ದಾಟಿ ಬಂದಿದ್ದೆವೆ. ಪ್ರಸ್ತುತ ಸಮಾಜ ‘ನಿರ್ಧಾರಿತ ಆರ್ಥಿಕತೆ’ಯಿಂದ ಬದಲಾಗಿ ‘ಆರ್ಥಿಕತೆ ನಿರ್ಧಾರಿತ ಸಮಾಜ’ವಾಗಿ ಬದಲಾಗುತ್ತಿದೆ. ಇದರಿಂದಾಗಿ ಪ್ರತಿಯೊಂದು ವಿಷಯವು ಹಣಕಾಸಿನ ಆಧಾರದ ಮೇಲೆ ನಿರ್ಧಾರಿತವಾಗುತ್ತಿದೆ. ಹಿಂದಿನ ತಲೆಮಾರಿನವರು ಒತ್ತಡ ರಹಿತ ನಿರಾಳತೆಯ ಜೀವನ ನಡೆಸಿದ್ದರು. ಪ್ರಸ್ತುತ ಯುವಜನತೆ ಜೀವನದ ಸ್ಪಷ್ಟತೆಯನ್ನು ಹೊಂದಿದ್ದರೂ, ಒತ್ತಡದ ಜೀವನ ನಿರ್ವಹಿಸುವಂತಾಗಿದೆ. ವಿದ್ಯಾರ್ಥಿಗಳು ಜೀವಪರ ಕಾಳಜಿ ಹೊಂದಿ ಸಂವೇದನಾಶೀಲ ನಡೆಯನ್ನು ಅನುಭವಿಸಲು ಸಾಹಿತ್ಯವನ್ನು ಓದಬೇಕು.” ಎಂದರು.
ಕೃತಿಯನ್ನು ಬಿಸಿನೆಸ್ ಮ್ಯಾನೆಜ್‌ಮೆಂಟ್ ವಿಭಾಗದ ಉಪನ್ಯಾಸಕ ಮನು ಪರಿಚಯಿಸಿದರು. ಲೇಖಕ ಹರೀಶ್ ಟಿ.ಜಿ. ಪ್ರಸ್ತಾವನೆಗೈದು ಸ್ವಾಗತಿಸಿದರು. ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ. ನಾರಾಯಣ ಶೆಟ್ಟಿ, ಆಡಳಿತ ಕುಲಸಚಿವ ಡಾ. ರವೀಂದ್ರನ್, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಉಪಸ್ಥಿತರಿದ್ದರು. ಉಪನ್ಯಾಸಕಿ ಅಪರ್ಣ ಪ್ರಾರ್ಥಿಸಿ, ವಿದ್ಯಾರ್ಥಿ ಶಶಾಂಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.