ಮಂಗಳೂರು : ಮಾಂಡ್ ಸೊಭಾಣ್ ತನ್ನ ಗಾಯನ ಮಂಡಳಿ ಸುಮೇಳ್ ನೇತೃತ್ವದಲ್ಲಿ ಗಾಯನದಲ್ಲಿ ಆಸಕ್ತಿಯುಳ್ಳ 5ರಿಂದ 10ನೇ ತರಗತಿವರೆಗಿನ ಮಕ್ಕಳಿಗಾಗಿ ಸುರ್ ಸೊಭಾಣ್ (ಸ್ವರ ಸೌಂದರ್ಯ) ಎಂಬ 60 ಗಂಟೆಗಳ ಕೊಂಕಣಿ ಗಾಯನ ತರಬೇತಿಯನ್ನು ಆಯೋಜಿಸುತ್ತಿದೆ. ತಿಂಗಳ ಮೊದಲ ಭಾನುವಾರ ಹೊರತುಪಡಿಸಿ, ಉಳಿದ ಎಲ್ಲಾ ಭಾನುವಾರಗಳಂದು ಅಪರಾಹ್ನ 3.00ರಿಂದ 5.30 ತನಕ ಶಕ್ತಿನಗರದ ಕಲಾಂಗಣದಲ್ಲಿ ತರಗತಿಗಳು ನಡೆಯಲಿವೆ.
ಹಿಂದೂಸ್ತಾನಿ ಗಾಯನದಲ್ಲಿ ಪದವಿ ಪಡೆದ, ಕೊಂಕಣಿ ಗಾಯನ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಿರುವ ಶಿಲ್ಪಾ ತೇಜಸ್ವಿನಿ ಕುಟಿನ್ಹಾ ಇವರು ಪ್ರಧಾನ ತರಬೇತುದಾರರಾಗಿರುವರು. ಸ್ವರ, ಧ್ವನಿ ನಿಯಂತ್ರಣ, ಹಾಡುಗಾರಿಕೆಯ ತಂತ್ರಗಳು ಹಾಗೂ ಇವನ್ನು ಉಪಯೋಗಿಸಿ ಕೊಂಕಣಿ ಹಾಡುಗಳನ್ನು ಹಾಡುವ ಬಗ್ಗೆ ವಿದ್ಯುಕ್ತವಾಗಿ ಕಲಿಸಲಾಗುವುದು. ಪಠ್ಯಪುಸ್ತಕಗಳು ಹಾಗೂ ಬರಹ ಸಾಮಾಗ್ರಿಗಳನ್ನು ಒದಗಿಸಲಾಗುವುದು. ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರಿಂದ ಪ್ರಮಾಣ ಪತ್ರ ಲಭಿಸಲಿದೆ. ದಿನಾಂಕ 18-08-2024ರಿಂದ ತರಗತಿಗಳು ಆರಂಭವಾಗಲಿದ್ದು, ವಾಟ್ಸಪ್ ಸಂಖ್ಯೆ 8105226626 ಮೂಲಕ ಹೆಸರು ನೋಂದಾಯಿಸಬಹುದು.