ಮುಂಡೂರು : ದ.ಕ. ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಗ್ರಾಮ ಪಂಚಾಯತ್ ಮುಂಡೂರು ಸಹಕಾರದೊಂದಿಗೆ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇವರ ಸಂಯೋಜನೆಯಲ್ಲಿ, ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ್ ರೈ ಅಬುದಾಬಿ ಇವರ ಪೋಷಕತ್ವದಲ್ಲಿ, ಯುವ ಜನತೆಯನ್ನು ಸಾಹಿತ್ಯ ಲೋಕದತ್ತ ಬರಮಾಡಿಕೊಳ್ಳುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಂಡೂರು ಗ್ರಾಮದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಎಂಬ ಘೋಷ ವಾಕ್ಯದಲ್ಲಿ ನಡೆಸುವ ‘ಗ್ರಾಮ ಸಾಹಿತ್ಯ ಸಂಭ್ರಮ -2024’ ಸರಣಿ-15 ಈ ಕಾರ್ಯಕ್ರಮವು ಮುಂಡೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ 27 ಜುಲೈ 2024ರ ಶನಿವಾರ ಬೆಳಿಗ್ಗೆ ಗಂಟೆ 9-30ರಿಂದ ನಡೆಯಲಿದೆ.
ಈ ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ಸ.ಉ.ಹಿ.ಪ್ರಾ. ಶಾಲೆ ಮುಂಡೂರು ಇಲ್ಲಿನ ವಿದ್ಯಾರ್ಥಿನಿ ಕು. ಸಮ್ನ ಇವರು ವಹಿಸಲಿದ್ದಾರೆ. ಮಧ್ಯಾಹ್ನ 3-00 ಗಂಟೆಗೆ ನಡೆಯುವ ಸಮಾರೋಪ ಭಾಷಣವನ್ನು ಎಸ್.ಜಿ.ಎಂ. ಅನುದಾನಿತ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕು. ಪೂಜಾ ಕೆ. ಇವರು ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಲಿದ್ದು, ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಎನ್.ಎಸ್.ಡಿ. ಸಮಾರಂಭ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಂಡೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಅಜಿತ್, 21ನೇ ಪುತ್ತೂರು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ. ಶ್ರೀಧರ ಎಚ್.ಜಿ, ನರಿಮೊಗರು ಸಿ.ಆರ್.ಪಿ. ಶ್ರೀಮತಿ ಪರಮೇಶ್ವರಿ ಪ್ರಸಾದ್ ಉಪಸ್ಥಿತರಿರುವರು.
ಮುಂಡೂರು ಗ್ರಾಮದ ವಿವಿಧ ಕ್ಷೇತ್ರದ ಸಾಧಕರಾದ ಶ್ರೀಮತಿ ಮನೋರಮಾ ಹೆಜಮಾಡಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶ್ರೀ ಬಿ. ವೆಂಕಟ್ರಮಣ ಶಗ್ರಿತ್ತಾಯ, ಶ್ರೀ ವಿನೋದ್ ರೈ ಸೊರಕೆ, ಶ್ರೀ ಬಿ.ವಿ. ಸೂರ್ಯನಾರಾಯಣ, ಶ್ರೀ ಕೆ.ಎಂ. ಹನೀಫ್ ರೆಂಜಲಾಡಿ, ಶ್ರೀ ಧರ್ಣಪ್ಪ ಪೂಜಾರಿ, ಶ್ರೀ. ಜಯರಾಜ್ ಸುವರ್ಣ, ಶ್ರೀ ಯೂಸುಫ್ ರೆಂಜಲಾಡಿ, ಕು. ನವ್ಯ ರೆಂಜಲಾಡಿ ಇವರನ್ನು ಮುಂಡೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಸುರೇಶ್ ಕುಮಾರ್ ಸೊರಕೆ ಅಭಿನಂದಿಸಲಿದ್ದಾರೆ.
ವಿವಿಧ ಗೋಷ್ಠಿಗಳು ಸಭಾ ಕಾರ್ಯಕ್ರಮದ ಬಳಿಕ ಸಾಹಿತ್ಯಕ್ಕೆ ಮುಂಡೂರು ಗ್ರಾಮದ ಕೊಡುಗೆ ವಿಷಯದ ಕುರಿತು ತರಂಗ ಪತ್ರಿಕೆಯ ಉಪ ಸಂಪಾದಕರಾದ ಮನೋರಮಾ ಹೆಜಮಾಡಿ ಹಾಗೂ ಕನ್ನಡದಲ್ಲೂ ಐ.ಎ.ಎಸ್. ಬರೆಯಿರಿ ಕುರಿತು ಶ್ರೀ ಪ್ರಣವ್ ಭಟ್ ಉಪನ್ಯಾಸ ನೀಡಲಿದ್ದಾರೆ. ಮುಂಡೂರು ಗ್ರಾಮಕ್ಕೆ ಸಂಬಂಧಪಟ್ಟ ಸ.ಉ.ಹಿ.ಪ್ರಾ. ಶಾಲೆ ಮುಂಡೂರು, ಎಸ್.ಜಿ.ಎಂ. ಅನುದಾನಿತ ಪ್ರೌಢ ಶಾಲೆ ಸರ್ವೆ, ಸ.ಹಿ.ಪ್ರಾ. ಶಾಲೆ ಭಕ್ತಕೋಡಿ, ಸ.ಹಿ.ಪ್ರಾ. ಶಾಲೆ ಸರ್ವೆ ಕಲ್ಪಣೆ, ಸರಕಾರಿ ಪ್ರೌಢ ಶಾಲೆ ಸರ್ವೆ ಕಲ್ಪಣೆ ಇಲ್ಲಿನ ವಿದ್ಯಾರ್ಥಿಗಳು ಬಾಲ ಕವಿಗೋಷ್ಠಿ, ಬಾಲ ಕಥಾಗೋಷ್ಠಿ, ಪ್ರವಾಸ ಕಥನ ಅಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಗೋಷ್ಠಿಯಲ್ಲಿ ಪ್ರವಾಸ ಕಥನ ಸೇರ್ಪಡೆ ಮಕ್ಕಳನ್ನ ಸಾಹಿತ್ಯ ಮತ್ತು ಬರವಣಿಗೆ ಕ್ಷೇತ್ರಕ್ಕೆ ಸೆಳೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಪ್ರವಾಸ ಕಥನ ಗೋಷ್ಠಿಯನ್ನು ಅಳವಡಿಸಿಕೊಳ್ಳಲಾಗಿದೆ. ನಂತರ ನಡೆಯುವ ಸಾರ್ವಜನಿಕ ವಿಭಾಗದ ಕವಿಗೋಷ್ಠಿ ಹಿರಿಯ ಸಾಹಿತಿಗಳಾದ ಶ್ರೀ ನಾರಾಯಣ ರೈ ಕುಕ್ಕುವಳ್ಳಿಯವರ ಅಧ್ಯಕ್ಷತೆಯಲ್ಲಿ ನೆರವೇರಲಿದೆ. ಬೆಳಗ್ಗೆ 9:00ರಿಂದ ಸಂಜೆ 4ರ ತನಕ ನಡೆಯುವ ಈ ಗ್ರಾಮ ಸಾಹಿತ್ಯ ಸಂಭ್ರಮ ಕಾರ್ಯಕ್ರಮವು ಮಕ್ಕಳ ಸಾಹಿತ್ಯ ಸಮ್ಮೇಳನದ ಸ್ವರೂಪದಲ್ಲಿ ನಡೆಯಲಿದೆ ಎಂದು ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕರಾದ ನಾರಾಯಣ ಕುಂಬ್ರ ತಿಳಿಸಿದ್ದಾರೆ.