ಉಡುಪಿ : ರಂಗಭೂಮಿ ಉಡುಪಿ ವತಿಯಿಂದ ಉಡುಪಿ ರಂಗ ತಂಡಗಳ ಸಹಭಾಗಿತ್ವದಲ್ಲಿ ದಿನಾಂಕ 25 ಜುಲೈ 2024ರಂದು ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ರಂಗಭೂಮಿಯ ದಿ. ಸದಾನಂದ ಸುವರ್ಣ ಅವರಿಗೆ ನುಡಿ ನಮನ ಕಾರ್ಯಕ್ರಮ ಮತ್ತು ‘ಸಮಕಾಲೀನ ರಂಗನಟನೆಯಲ್ಲಿ ಭಾರತೀಯ ಪರಂಪರೆ ಎಂಬುದುದೊಂದು ಇದೆಯೇ ?’ ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಹಿರಿಯ ರಂಗಕರ್ಮಿ ಪ್ರಸನ್ನ ಇವರು “ಪ್ರಸ್ತುತ ಯಾವ ರಾಜಕಾರಣಿಗಳು ಕೂಡ ನಾಟಕವನ್ನು ನೋಡುತ್ತಿಲ್ಲ. ಈ ಅದ್ಭುತ ಮನರಂಜನಾತ್ಮಕ ಶೈಕ್ಷಣಿಕ ಕ್ಷೇತ್ರವನ್ನು ಎಲ್ಲರೂ ಕಡೆಗಣಿಸುತ್ತಿದ್ದಾರೆ. ರಾಜಕಾರಣಿಗಳನ್ನು ಮತ್ತು ರಾಜಕೀಯ ಪಕ್ಷಗಳನ್ನು ಮೂರ್ಖರ ರೀತಿಯಲ್ಲಿ ನಂಬಿ ಜಗಳ ಆಡುವ ದುರಂತ ಸ್ಥಿತಿಗೆ ದೇಶ ಬಂದಿದೆ. ರಂಗಭೂಮಿ ಪ್ರಸ್ತುತತೆ ಅವುಗಳಿಂದಾಗುವ ಸಾಮಾಜಿಕ ಪರಿಣಾಮಗಳ ಬಗ್ಗೆ ಅರಿವೇ ಇಲ್ಲದ ಸ್ಥಿತಿಯಲ್ಲಿ ವ್ಯವಸ್ಥೆ ಇದೆ. ಕ್ರಿಯೆಯನ್ನು ಕಟ್ಟಿದಾಗ ಮಾತ್ರ ನಟನಲ್ಲಿ ನಿಜವಾದ ಪಾತ್ರ ಭಾವನೆ ಮೂಡುತ್ತದೆ, ಶಕ್ತಿಯನ್ನು ನೀಡುತ್ತದೆ. ಆ ಶಕ್ತಿಯೇ ಭಾವವಾಗಿ ಪರಿವರ್ತನೆಯಾಗುತ್ತದೆ. ಕ್ರಿಯೆಯನ್ನು ಬಳಸಿಕೊಂಡು ಸಂಭಾಷಣೆ ಹೇಳಿದಾಗ ಅದಕ್ಕೆ ವಿಸ್ತಾರ ದೊರೆತು ಹಲವು ಆಯಾಮಗಳನ್ನು ಪಡೆಯುತ್ತದೆ. ಅದನ್ನು ನೋಡಿ ಪ್ರೇಕ್ಷಕರು ಆನಂದ ಪಡುತ್ತಾರೆ. ಇದು ನಟನೆ ಕಟ್ಟುವ ಭಾರತೀಯ ಪರಂಪರೆಯಾಗಿದೆ. ಸದಾನಂದ ಸುವರ್ಣರು ಭಾರತೀಯ ರಂಗಭೂಮಿ ಇತಿಹಾಸದಲ್ಲಿ ನಾಯಕನಾಗಿ ನಿಲ್ಲುತ್ತಾರೆ. ರಂಗಭೂಮಿ ಕ್ಷೇತ್ರದಲ್ಲಿ ಸಮಗ್ರ ಭಾರತೀಯ ಪರಂಪರೆ ರೂಪಿಸಿದ ರಂಗಕರ್ಮಿಯಾಗಿದ್ದ ಅವರು ರಂಗಭೂಮಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ” ಎಂದು ಬಣ್ಣಿಸಿದರು.
ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯದರ್ಶಿ ನಟೇಶ್ ಉಲ್ಲಾಳ್ ನುಡಿ ನಮನ ಸಲ್ಲಿಸಿ, “ಕಲಾತಪಸ್ವಿಯಾಗಿ ಬದ್ಧತೆ ಮೆರೆದ ಅವರ ಸ್ಥಿತಪ್ರಜ್ಞೆ ಹಲವರಿಗೆ ಆದರ್ಶವಾಗಿತ್ತು” ಎಂದರು. ಡಾ. ಕೆ.ಎಂ. ರಾಘವ ನಂಬಿಯಾರ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಸುಧಾ ಆಡುಕಳ, ಪ್ರಮುಖರಾದ ಬಾಸುಮ ಕೊಡಗು, ಮುರಳೀಧರ ಉಪಾಧ್ಯ ಹಿರಿಯಡಕ, ಭಾಸ್ಕರ್ ರಾವ್ ಕಿದಿಯೂರು, ಸಂತೋಷ್ ಕುಮಾರ್ ಪಟ್ಲ, ಮುರಳಿ ಕಡೆಕಾರ್, ನಾಗೇಶ್ ಕುಮಾರ್ ಉದ್ಯಾವರ, ಭ್ರಾಮರಿ, ರಾಜಗೋಪಾಲ ಬಲ್ಲಾಳ್, ಗಂಗಾಧರ್ ಕಿದಿಯೂರು, ಎಂ.ಎಸ್ .ಭಟ್ ಭಾಗವಹಿಸಿ ನುಡಿನಮನ ಸಮರ್ಪಿಸಿದರು. ಪ್ರದೀಪ್ ಚಂದ್ರ ಕುತ್ಪಾಡಿ ಪ್ರಸ್ತಾವನೆಗೈದು, ನಿರೂಪಿಸಿದರು.