27 ಫೆಬ್ರವರಿ 2023, ಮಂಗಳೂರು: “ಸಾಧಕರ ಸಮ್ಮಾನದಿಂದ ಯುವ ಪ್ರತಿಭೆಗಳಿಗೆ ಪ್ರೇರಣೆ”
ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಾಧಕರನ್ನು ಗುರುತಿಸುವುದು ಒಂದು ಅತ್ಯುತ್ತಮ ಕಾರ್ಯ. ಇದರಿಂದ ಪ್ರೇರಣೆ ಪಡೆದ ಯುವ ಪ್ರತಿಭೆಗಳು ಮುಂದೆ ಭವಿಷ್ಯದಲ್ಲಿ ಹೆಚ್ಚು ಸಾಧನೆ ಮಾಡಲು ಸಹಾಯವಾಗುತ್ತದೆ ಎಂದು ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್. ಗಣೇಶ್ ರಾವ್ ಹೇಳಿದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಉರ್ವಸ್ಟೋರ್ ನ ಅಂಬೇಡ್ಕರ್ ಭವನದಲ್ಲಿ ಫೆಬ್ರವರಿ 26ರಂದು ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರಕಾರ ಅರ್ಹರಿಗೆ ಪ್ರಶಸ್ತಿ ನೀಡುವ ಮೂಲಕ ಪದ್ಮಶ್ರೀಗೆ ಗೌರವ ಬಂದಿದೆ. ಸಾಧಕರಿಗೆ ಯಾವತ್ತೂ ನಿವೃತ್ತಿ ಎಂಬುವುದಿಲ್ಲ. ಬದುಕಿನುದ್ದಕ್ಕೂ ಅವರಿಂದ ಸಮಾಜಕ್ಕೆ ಸ್ಪೂರ್ತಿ ನೀಡುವ ಕಾರ್ಯ ನಡೆಯುತ್ತಲೇ ಇರಬೇಕು ಎಂದವರು ಹೇಳಿದರು.
ಸಾಧಕರಿಗೆ ಪ್ರಶಸ್ತಿ ಪ್ರದಾನ :
ಎಸ್. ದೊಡ್ಡಣ್ಣ (ಚಲನಚಿತ್ರ), ಎಂ.ಜಿ.ಆರ್. ಅರಸ್ (ಸಾಹಿತ್ಯ, ಪ್ರಕಾಶನ), ಎಂ.ಎಸ್. ಮಹಾಬಲೇಶ್ವರ (ಬ್ಯಾಂಕಿಂಗ್), ಸೀತಾರಾಮ ಕುಮಾರ್ ಕಟೀಲು (ಯಕ್ಷಗಾನ), ಸಚ್ಚಿದಾನಂದ ಉಡುಪ (ಪತ್ರಿಕೋದ್ಯಮ), ನವನೀತ ಶೆಟ್ಟಿ ಕದ್ರಿ (ಮಾಧ್ಯಮ ಮತ್ತು ಯಕ್ಷಗಾನ), ಪಿ.ಬಿ. ಹರೀಶ್ ರೈ (ಪ್ರತಿಕೋದ್ಯಮ ), ಅರೆಹೊಳೆ ಸದಾಶಿವ ರಾವ್ (ಸಂಘಟನೆ ಮತ್ತು ಕಲಾಸೇವೆ), ವಿಭಾ ಶ್ರೀನಿವಾಸ ನಾಯಕ್ (ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ) ಅವರಿಗೆ ಸಾಧನಾ ಯುವ ರಾಜ್ಯ ಪ್ರಶಸ್ತಿ, ಜಗದೀಶ್ ಚಂದ್ರ ಸೂಟರ್ ಪೇಟೆ ಅವರಿಗೆ (ಕ್ರೀಡಾ ವರದಿಗಾರಿಕೆ) ಸಾಧನಾ ವಿಶೇಷ ಪುರಸ್ಕಾರ, ಲಾಲಿತ್ಯ ಬೇಲೂರು (ಬಹುಮುಖ ಪ್ರತಿಭೆ) ಅವರಿಗೆ ಸಾಧನಾ ರಾಜ್ಯ ಬಾಲ ಪುರಸ್ಕಾರ, ಶ್ರೀ ವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ (ಸಾಮಾಜಿಕ), ಜೈ ತುಳುನಾಡ್ (ತುಳು ಭಾಷಾ ಹೋರಾಟ) ಸಂಘಟನೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಭುವನಾಭಿರಾಮ ಉಡುಪ, ಇರಾ ನೇಮು ಪೂಜಾರಿ, ಹರೀಶ್ ಸುಲಾಯ ಮುಖ್ಯ ಅತಿಥಿಗಳಾಗಿದ್ದರು. ಲತಾ ಕೃಷ್ಣದಾಸ್ ಮೊದಲಾದವರು ಉಪಸ್ಥಿತರಿದ್ದರು. ಸಾಧನಾ ಪ್ರತಿಷ್ಠಾನದ ಅಧ್ಯಕ್ಷ ಕಾ.ವೀ . ಕೃಷ್ಣದಾಸ್ ಪ್ರಸ್ತಾವಿಸಿ, ಆರ್.ಜೆ. ಪ್ರಸನ್ನ ನಿರೂಪಿಸಿದರು.