ಉಡುಪಿ : ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ (ರಿ.) ಪ್ರಾಯೋಜಿತ 2024ನೇ ಸಾಲಿನ ಗುರು ಮಟಪಾಡಿ ವೀರಭದ್ರ ನಾಯಕ್ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಬಣ್ಣದ ವೇಷಧಾರಿ ಶ್ರೀ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯ ಅವರು ಆಯ್ಕೆಯಾಗಿರುತ್ತಾರೆ
ಯಕ್ಷಗಾನ ಕೇಂದ್ರ ಇಂದ್ರಾಳಿ ಇದರ ಸಹಯೋಗದಲ್ಲಿ ಕೊಡಮಾಡುವ ಈ ಪ್ರಶಸ್ತಿಯು ರೂಪಾಯಿ 10,000 ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಪ್ರಶಸ್ತಿಯನ್ನು 09 ನವಂಬರ್ 2024ರಂದು ಎಂ. ಜಿ. ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬೇಳಂಜೆ ಸಂಜೀವ ಹೆಗ್ಡೆ ಟ್ರಸ್ಟ್ ಇವರ ಸಹಯೋಗದಲ್ಲಿ ನೀಡಿ ಗೌರವಿಸಲಾಗುವುದು ಎಂದು ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.
ಬಡಗುತಿಟ್ಟು ಯಕ್ಷಗಾನ ಪ್ರಪಂಚದಲ್ಲಿ ಬಣ್ಣದ ವೇಷಧಾರಿಯಾಗಿ ವಿಖ್ಯಾತರಾಗಿರುವ ಶ್ರೀ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯ ಇವರು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನೀಲಾವರ ಸಮೀಪದ ಎಲ್ಲಂಪಳ್ಳಿ ಎಂಬಲ್ಲಿ 1956ರಲ್ಲಿ ಜನಿಸಿದರು. ಉಡುಪಿ ಬಸವ, ವಂಡ್ಸೆ ನಾರಾಯಣ ಗಾಣಿಗ, ಪೇತ್ರಿ ಮಾಧವ ನಾಯ್ಕ್ ಇವರಿಂದ ಪ್ರಾಥಮಿಕ ನೃತ್ಯಾಭ್ಯಾಸ ಮಾಡಿ ಬಾಲಗೋಪಾಲನಾಗಿ ಮಂದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿದರು. ನಂತರ ಉಡುಪಿ ಯಕ್ಷಗಾನ ಕೇಂದ್ರ ಇಂದ್ರಾಳಿಯಲ್ಲಿ ಯಕ್ಷಗಾನ ವಿದ್ಯೆ ಕಲಿತು ಕೇಂದ್ರದ ಖಾಯಂ ಸದಸ್ಯರಾಗಿ ಗುರು ವೀರಭದ್ರ ನಾಯಕ್, ನೀಲಾವರ ರಾಮಕೃಷ್ಣಯ್ಯ, ಹಿರಿಯಡಕ ಗೋಪಾಲರಾವ್, ಮಹಾಬಲ ಕಾರಂತ ಹಾಗೂ ವೆಂಕಟರಮಣ ಗಾಣಿಗ ಮುಂತಾದವರಿಂದ ತಾಳ ಮತ್ತು ಹೆಜ್ಜೆಗಾರಿಕೆಯಲ್ಲಿ ಪರಿಪೂರ್ಣತೆ ಸಾಧಿಸಿದರು. ಮಂದಾರ್ತಿ, ಪೆರ್ಡೂರು ಹಾಗೂ ಸಾಲಿಗ್ರಾಮ ವೃತ್ತಿ ಮೇಳದಲ್ಲಿ 35 ವರ್ಷಗಳ ಕಾಲ ತಿರುಗಾಟ ನಡೆಸಿದ ಆಚಾರ್ಯರು ಕೋಟ ಶಿವರಾಮ ಕಾರಂತರಲ್ಲಿ ಸಾಂಪ್ರದಾಯಿಕ ಶೈಲಿಯ ಬಣ್ಣದ ಮುಖವರ್ಣಿಕೆ, ಒಡ್ಡೋಲಗ ಕ್ರಮ, ವೇಷಭೂಷಣ ನಡೆಗಳ ಕುರಿತಾದ ಸಮಗ್ರ ಅಧ್ಯಯನ ನಡೆಸಿ ಕಾರಂತರೊಂದಿಗೆ ರಷ್ಯಾ, ದುಬೈ, ಅಬುಧಾಬಿ ಸಹಿತ ವಿವಿಧ ರಾಷ್ಟ್ರಗಳಲ್ಲಿ ತಿರುಗಾಟ ನಡೆಸಿದ್ದಾರೆ. ಶೂರ್ಪನಖಾ, ರಾವಣ, ಹಿಡಿಂಬಾ ಮುಂತಾದ ಬಣ್ಣದ ವೇಷಗಳು ಆಚಾರ್ಯರಿಗೆ ಕೀರ್ತಿ ತಂದಿವೆ. ಇವರ ಕಲಾಸಾಧನೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ, ಗೋರ್ಪಾಡಿ ವಿಠಲ ಪಾಟೀಲ ಪ್ರಶಸ್ತಿ ಸಹಿತ ಹಲವಾರು ಸಂಮಾನಗಳು ಸಂದಿವೆ.