ಪುತ್ತೂರು : ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಾಹಿತ್ಯ ಸಂಘದ ಉದ್ಘಾಟನೆ ಹಾಗೂ ಪತ್ರಿಕಾ ವರದಿಗಾರಿಕೆ ಕಾರ್ಯಾಗಾರವು 27 ಜುಲೈ2024ರಂದು ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ರವಿ ಮುಂಗ್ಲಿಮನೆ ಮಾತನಾಡಿ “ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಸಮಾಜದಲ್ಲಿ ಕ್ರಿಯಾಶೀಲ ವ್ಯಕ್ತಿಗಳಾಗಿ ಹೊರಹೊಮ್ಮಲು ಸಹಕಾರಿಯಾಗುತ್ತದೆ. ನೈಜತೆಯ ವರದಿ ಮಾಡುವುದು ಕೂಡಾ ಒಂದು ರೀತಿಯ ಸೇವೆಯೇ ಆಗಿದ್ದು ವಿದ್ಯಾರ್ಥಿಗಳು ಇಂತಹ ಕೆಲಸಗಳಲ್ಲಿ ಭಾಗಿಗಳಾಗಿ ಸಮಾಜಸೇವೆ ಹಾಗೂ ದೇಶಸೇವೆ ಮಾಡಬೇಕು.” ಎಂದು ನುಡಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಹೇಶ್ ನಿಟಿಲಾಪುರ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಗಾರದ ಉದ್ಘಾಟನಾ ಸಮರಸಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ನಾಗರಾಜ ಎನ್. ಕೆ. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ಸಂಯೋಜಕರಾದ ಶ್ರೀವತ್ಸ ಮಾತನಾಡಿ “ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ಸಾಹಿತ್ಯಸಂಘ ಆರಂಭಿಸುವುದು ಕಾಲೇಜು ಆಡಳಿತ ಮಂಡಳಿಯ ಆಶಯವಾಗಿದ್ದು, ಅದು ಈ ವರ್ಷ ಕೈಗೂಡಿದೆ. ಶಿಕ್ಷಣದ ಜತೆಜತೆಗೆ ತಮ್ಮ ಕೌಶಲ್ಯಗಳ ಅನಾವರಣಕ್ಕೆ ವೇದಿಕೆ ಕಲ್ಪಿಸಿಕೊಡುವುದು ವರದಿಗಾರಿಕೆ ಕಾರ್ಯಾಗಾರದ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಇಂತಹ ವೇದಿಕೆಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು.” ಎಂದರು .
ಪತ್ರಿಕಾ ವರದಿಗಾರಿಕೆಯ ಬಗೆಗೆ ನಡೆದ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ನಾಗರಾಜ ಎನ್. ಕೆ. ಮಾತನಾಡಿ “ಪತ್ರಿಕಾ ವರದಿಗಾರಿಕೆಗೆ ಅತೀ ಅಗತ್ಯವಾಗಿ ಭಾಷಾ ಶುದ್ಧತೆ ಬೇಕಾಗುತ್ತದೆ. ಇದು ವರದಿಯ ತೂಕವನ್ನು ಹೆಚ್ಚಿಸುತ್ತದೆ. ಸಾಧ್ಯವಾದಷ್ಟು ವರದಿಗಾರಿಕೆಯು ಸತ್ಯಾಂಶವನ್ನು ತೆರೆದಿಡಬೇಕಾಗುತ್ತದೆ. ಅದರಲ್ಲಿ ಆಸಕ್ತಿ ಇದ್ದಾಗ ಮಾತ್ರ ವರದಿಗಾರಿಕೆ ಜೀವಂತವಾಗಿರುತ್ತದೆ.” ಎಂದು ನುಡಿದರು. ಬಳಿಕ ಚಟುವಟಿಕೆ ಆಧಾರಿತವಾದ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಉಪನ್ಯಾಸಕೇತರ ವೃಂದದವರು, ವಿದ್ಯಾರ್ಥಿಗಳು ಹಾಗೂ ವಿವೇಕಾನಂದ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥರಾದ ವಿದ್ಯಾಪಾರ್ವತಿ ಸ್ವಾಗತಿಸಿ, ವಿದ್ಯಾರ್ಥಿನಿ ಸಹನಾ ನಿರೂಪಿಸಿ, ಯುಕ್ತಶ್ರೀ ವಂದಿಸಿದರು.