ಮಗಳೂರು : ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಮತ್ತು ಕಥಾಬಿಂದು ಪ್ರಕಾಶನ ಮಂಗಳೂರು ಇದರ ಸಹಯೋಗದಲ್ಲಿ ‘ಸಾಹಿತ್ಯ ಸುಗ್ಗಿ’ ಕಾರ್ಯಕ್ರಮವು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ‘ಸಾನಿಧ್ಯ’ ಸಭಾಂಗಣದಲ್ಲಿ 27 ಜುಲೈ2024 ರಂದು ನೆರವೇರಿತು.
ಆಂಗ್ಲ ಭಾಷಾ ಪ್ರಾಧ್ಯಾಪಕರಾದ ಆಲ್ವೇನ್ ಡಿ’ಸೋಜಾ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಮಾಹಿತಿ ಮತ್ತು ತಂತ್ರ ಜ್ಞಾನ ಇಂಜಿನಿಯರ್ ಆದ ಶ್ರೀ ಬಿ. ಮಹಾಬಲ ತಿಲಕ ಇವರು ಬಿ. ಸತ್ಯವತಿ ಭಟ್ ಕೊಳ್ಚಪ್ಪು ವಿರಚಿತ ‘ಮತ್ತೆ ನಕ್ಕಳು ಪ್ರಕೃತಿ’ ಕೃತಿ ಬಿಡುಗಡೆ ಗೊಳಿಸಿದರು. ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯ ಸ್ಥಾಪಕ ಅಧ್ಯಕ್ಷ ವಾಮನ್ ರಾವ್ ಬೇಕಲ್ ಹಾಗೂ ಕನ್ನಡ ಭವನ ಪ್ರಕಾಶನದ ಪ್ರಕಾಶಕಿ ಸಂಧ್ಯಾರಾಣಿ ಟೀಚರ್ ಇವರಿಗೆ ಕೃತಿ ಕರ್ತೃ ಬಿ. ಸತ್ಯವತಿ ಭಟ್ ಕೊಳ್ಚಪ್ಪೆ ಕೃತಿಯ ಪ್ರತಿ ನೀಡುವ ಮೂಲಕ ಲೋಕಾರ್ಪಣೆ ಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಕಾಶವಾಣಿಯ ನಿವೃತ್ತ ನಿರ್ದೇಶಕರಾದ ವಸಂತ್ ಕುಮಾರ್ ಪೆರ್ಲ, ಕನ್ನಡ ಪ್ರಾಧ್ಯಾಪಕರಾದ ಡಾ. ವಿಶ್ವನಾಥ್ ಬದಿಕಾನ, ಕಥಾಬಿಂದು ಪ್ರಕಾಶನದ ಪ್ರದೀಪ್ ಕುಮಾರ್, ಹಿರಿಯ ಸಾಹಿತಿ ಹಾಗೂ ಪತ್ರಕರ್ತರಾದ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಉಪಸ್ಥಿತರಿದ್ದರು.
ಸುರತ್ಕಲ್ ಗೋವಿಂದದಾಸ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಿ. ಕೃಷ್ಣಮೂರ್ತಿ ಕೃತಿ ಪರಿಚಯ ಮಾಡಿದರು. ನಿವೃತ್ತ ಪ್ರಾಧ್ಯಾಪಕರಾದ ಗುಣಾಜೆ ರಾಮಚಂದ್ರ ಭಟ್ ಆಶಯ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಮತ್ತು ಕವಿಗಳಾದ ಲಕ್ಷ್ಮಿ ವಿ. ಭಟ್ ಇವರನ್ನು ಸನ್ಮಾನಿಸಲಾಯಿತು. ಖ್ಯಾತ ಗಝಲ್ ಕವಿಗಳಾದ ಡಾ ಸುರೇಶ್ ನೆಗಳಗುಳಿ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಕೃತಿಯ ಕರ್ತೃ ಕೊಳ್ಚಪ್ಪೆ ಬಿ. ಸತ್ಯವತಿ ಭಟ್ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.