ಉಡುಪಿ : ಸರಿಗಮ ಭಾರತಿ ಸಂಗೀತ ವಿದ್ಯಾಲಯ (ರಿ) ಪರ್ಕಳ ಉಡುಪಿ ಈ ಸಂಸ್ಥೆಯ ರಜತ ಮಹೋತ್ಸವವನ್ನು 01 ಆಗಸ್ಟ್ 2024ರಂದು ಕರ್ನಾಟಕ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಇವರು ಉಡುಪಿಯ ಶಾರದಾ ಮಂಟಪ ರಸ್ತೆಯಲ್ಲಿರುವ ಇನ್ಫೋಸಿಸ್ ಫೌಂಡೇಶನ್ -ಯಕ್ಷಗಾನ ಕಲಾರಂಗದ (ಐ.ವೈ.ಸಿ.) ಸಭಾಂಗಣದಲ್ಲಿ ಸಂಜೆ ಗಂಟೆ 4-45ಕ್ಕೆ ಉದ್ಘಾಟಿಸಲಿದ್ದಾರೆ. ಉಡುಪಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಶ್ರೀ ರಾಘವೇಂದ್ರ ಆಚಾರ್ಯರು ಪ್ರಾರ್ಥನಾ ಸ್ತುತಿ ಪ್ರಸ್ತುತ ಪಡಿಸಲಿದ್ದಾರೆ. ಉಡುಪಿಯ ಯಕ್ಷಗಾನ ಕಲಾರಂಗದ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
‘ಸರಿಗಮ ಭಾರತಿ’ಯು ಕಳೆದ 25 ವರ್ಷಗಳಿಂದ ಮಣಿಪಾಲ, ಉಡುಪಿ ಪರಿಸರದಲ್ಲಿ ನೂರಾರು ಕಿರಿಯ, ಹಿರಿಯ ಸಂಗೀತಾಸಕ್ತರನ್ನು ತರಬೇತುಗೊಳಿಸಿದ್ದಲ್ಲದೆ, ವೇದಿಕೆಯನ್ನು ಕಲ್ಪಿಸಿ ಕೊಡುತ್ತಾ ಸಂಗೀತವನ್ನು ಶ್ರೀಮಂತಗೊಳಿಸುವ ಪ್ರಯತ್ನ ಮಾಡಿದೆ. ತನ್ನ ವೇದಿಕೆಯ ಮೂಲಕ ನಾಡಿನ ಹಾಗೂ ದೇಶದ ಹಲವಾರು ಖ್ಯಾತ ಕಲಾವಿದರ ಸಂಗೀತ ಕಛೇರಿಗಳನ್ನು, ಕಾರ್ಯಾಗಾರಗಳನ್ನು ಹಮ್ಮಿಕೊಂಡು ಬಂದಿದೆ. ಹಿರಿಯ, ಕಿರಿಯ ಸಾಧಕ ಕಲಾವಿದರನ್ನು ಗುರುತಿಸಿ, ಗೌರವಿಸಿ ಸನ್ಮಾನಿಸಿದೆ. ಯಕ್ಷಗಾನ ತಾಳಮದ್ದಳೆ, ಭರತನಾಟ್ಯ, ಹರಿಕಥೆ, ಸತ್ಸಂಗ, ಭಜನೆ, ವೇದಾಭ್ಯಾಸ ಮುಂತಾದ ಕಲಾಪ್ರಕಾರಗಳಿಗೂ ವೇದಿಕೆಯಾಗಿ, ಒಂದು ಸಾಂಸ್ಕೃತಿಕ ಕೇಂದ್ರವಾಗಿ ಕೆಲಸ ನಿರ್ವಹಿಸಿ ಸುಸಂಸ್ಕೃತ ಸಮಾಜ ನಿರ್ಮಾಣದ ಪ್ರಯತ್ನವನ್ನು ಮಾಡಿದೆ.
ಈ ಸಂದರ್ಭದಲ್ಲಿ ಉಡುಪಿಯ ಹಲವು ಕಲಾ ಸಂಸ್ಥೆಗಳ ಖಜಾಂಜಿಯಾಗಿ ಕಳೆದ ಮೂರು ದಶಕಗಳಿಂದಲೂ ಹೆಚ್ಚು ಕಾಲ ದಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊಫೆಸರ್ ಕೆ. ಸದಾಶಿವ ರಾವ್ ಇವರನ್ನು ‘ಕಲಾಪೋಷಕ’ ಎಂದು ಗೌರವಿಸಿ ಸನ್ಮಾನಿಸಲಾಗುವುದು. ಉದ್ಘಾಟನೆ ನಂತರ ವಿದ್ವಾನ್ ಕೆ.ಎಸ್. ವಿಷ್ಣು ದೇವ್ ಇವರ ಕರ್ನಾಟಕ ಸಂಗೀತ ಕಚೇರಿ ನಡೆಯಲಿದೆ. ಇವರಿಗೆ ವಯಲಿನ್ ನಲ್ಲಿ ವಿದ್ವಾನ್ ವಿ.ಎಸ್. ಗೋಕುಲ್ ಆಲಂಗೋಡ್, ಮೃದಂಗದಲ್ಲಿ ವಿದ್ವಾನ್ ಸುನಾದಕೃಷ್ಣ ಅಮೈ ಹಾಗೂ ಘಟಂನಲ್ಲಿ ವಿದ್ವಾನ್ ಶ್ರೀಜಿತ್ ವೆಲ್ಲತ್ತಂಜೂರ್ ಸಹಕರಿಸಲಿದ್ದಾರೆ.