27 ಫೆಬ್ರವರಿ 2023, ಕಾಸರಗೋಡು: ಗುರುಗಳನ್ನು ಸ್ಮರಿಸಿಕೊಂಡು ಗೌರವ ಸಲ್ಲಿಸುವುದು ನಮ್ಮ ನಾಡಿನ ಸಂಸ್ಕೃತಿ – ನಾಡೋಜ ಡಾ.ಮಹೇಶ್ ಜೋಶಿ
ಅಶಾಶ್ವತವಾದ ದೇಹಕ್ಕೆ ಶಾಶ್ವತವಾದ ಅರಿವನ್ನು ನೀಡಿ ಜಗತ್ತನ್ನೇ ಗೆಲ್ಲುವ ಶಕ್ತಿಯನ್ನು ನೀಡುವವರು ಗುರುಗಳು. ಅಂತಹ ಗುರುಗಳನ್ನು ಸ್ಮರಿಸಿ ಗೌರವವನ್ನು ಸಲ್ಲಿಸುವುದು ನಮ್ಮ ಧರ್ಮ ಮತ್ತು ಸಂಸೃತಿ ಎಂದು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ್ ಜೋಶಿ ಹೇಳಿದರು.
26.2.2023ರಂದು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಹಮ್ಮಿ ಕೊಳ್ಳಲಾದ ದಿ.ಪ್ರೊ. ಪಿ.ಸುಬ್ರಾಯ ಭಟ್ ಜನ್ಮ ಶತಮಾನೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡದ ಮೇಲೆ ಅಪಾರ ಪ್ರೀತಿ ಅಭಿಮಾನ ಹೊಂದಿದ ಭಟ್ಟರು ಕನ್ನಡ ಕಲಿಕೆಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷವಾದ ಪ್ರೋತ್ಸಾಹ ನೀಡುತ್ತಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ವಿವೇಕ ರೈ ಮಾತನಾಡಿ ಪ್ರೊ.ಸಬ್ರಾಯ ಭಟ್ಟರು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಹಂತ ಹಂತವಾಗಿ ಕನ್ನಡ ಅಧ್ಯಯನಕ್ಕೆ ಅವಕಾಶವನ್ನು ಕಲ್ಪಿಸಿ ಸದಾ ಕಾಲ ಕನ್ನಡ ಹೋರಾಟವನ್ನು ನಡೆಸಿದವರು ಎಂದರು. ಕಾರ್ಯಕ್ರಮದ ಅಧ್ಕ್ಷತೆಯನ್ನು ವಹಿಸಿದ್ದ ಕಾಸರಗೋಡು ಸರಕಾರಿ ಕಾಲೇಜಿನ ಪ್ರಭಾರ ಪ್ರಾಂಶುಪಾಲರು ಮಾತನಾಡಿ, ಇದು ಅತ್ಯಂತ ಮಹತ್ವದ ಕಾರ್ಯಕ್ರಮ, ಉನ್ನತ ವ್ಯಕ್ತಿತ್ವದ ಸುಬ್ರಾಯ ಭಟ್ಟರಿಗೆ ಇದು ಸಮಯೋಚಿತವಾದುದು ಎಂದರು. ಕೆಂದ್ರ ಅಕಾಡಮಿಯ ವಿಶ್ರಾಂತ ಪ್ರದೇಶಿಕ ಕಾರ್ಯದರ್ಶಿ ಎಸ್. ಪಿ. ಮಹಾಲಿಂಗೇಶ್ವರ ಅವರು ಪುಸ್ತಕ ಪ್ರದರ್ಶನ ಉದ್ಘಾಟಿಸಿದರು.ಪ್ರೊ. ಪಿ. ಸುಬ್ರಾಯ ಭಟ್ಟರ ಭಾವಚಿತ್ರವನ್ನು ಕಾರ್ಯಕ್ರಮದ ಅಂಗವಾಗಿ ಅವರ ಹಿರಿಯ ಪುತ್ರ ಕೇಶವ ಭಟ್ ಅನಾವರಣಗೊಳಿಸಿದರು. ಪ್ರೊ. ಪಿ.ಸುಬ್ರಾಯ ಭಟ್ ಜನ್ಮಶತಮಾನೋತ್ಸವ ಸಮಿತಿ ಮತ್ತು ಕನ್ನಡ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ವಿಭಾಗ ಸರಕಾರಿ ಕಾಲೇಜು ಕಾಸರಗೋಡು ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಈ ಕಾರ್ಯಕ್ರವನ್ನು ಆಯೋಜಿಸಲಾಗಿತ್ತು.
ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಡಾ. ಪಿ. ಕೃಷ್ಣ ಭಟ್ ಪ್ರಸ್ತಾವಿಕ ಮಾತುಗಳನ್ನಾಡಿದರು.ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತ ಎಸ್. ಸ್ವಾಗತಿಸಿ, ಡಾ. ವಿದ್ಯಾಲಕ್ಷ್ಮಿ ಕುಂಬ್ಳೆ ನಿರೂಪಿಸಿದರು.