ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು 20 ವರ್ಷ ಪೂರೈಸಿದ ‘ಪಿಂಗಾರ’ ಸಹಯೋಗದಲ್ಲಿ ‘ಚಾರೊಳಿ’ 1000ದ ಸಂಭ್ರಮ ಕಾರ್ಯಕ್ರಮವು 27ಹಾಗೂ 28ಜುಲೈ 2024ರಂದು ಮಂಗಳೂರಿನ ಬಜ್ಜೋಡಿಯ ಸಂದೇಶ ಸಭಾಂಗಣದಲ್ಲಿ ನಡೆಯಿತು. ಪಿಂಗಾರ 20 ವರ್ಷಗಳ ವಿಶೇಷ ಸಂಚಿಕೆಯನ್ನು ಅನಾವರಣಗೊಳಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿದ ಎಂ. ಎಲ್. ಸಿ. ಐವನ್ ಡಿ’ಸೋಜ ಇವರು ಪಿಂಗಾರ ಪತ್ರಿಕೆಯ ಪ್ರಧಾನ ಸಂಪಾದಕ ರೇಮಂಡ್ ಡಿ’ಕುನ್ಹಾ ಅವರೊಂದಿಗೆ ತಮ್ಮ ಅಚ್ಚುಮೆಚ್ಚಿನ ನೆನಪುಗಳನ್ನು ಹಂಚಿಕೊಂಡರು ಮತ್ತು ಮುಂದಿನ ಪೀಳಿಗೆಗೆ ಪರಂಪರೆಯನ್ನು ರವಾನಿಸುವ ಮಹತ್ವವನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಭಯಚಂದ್ರ ಜೈನ್ “ನೈತಿಕ ವರದಿಗಾರಿಕೆ ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆಗೆ ‘ಪಿಂಗಾರ’ ಪತ್ರಿಕೆಯ ಬದ್ಧತೆ ಶ್ಲಾಘಿನೀಯ. ಕಳೆದ ಎರಡು ದಶಕಗಳಲ್ಲಿ ‘ಪಿಂಗಾರ’ ಪತ್ರಿಕೆಯು ನಿರಂತರವಾಗಿ ಉತ್ತಮ ಗುಣಮಟ್ಟದ ಪತ್ರಿಕೋದ್ಯಮವನ್ನು ನೀಡಿದ್ದಾರೆ. ಧನಾತ್ಮಕ ಸುದ್ದಿಗಳು ಮತ್ತು ಕಥೆಗಳನ್ನು ಪ್ರೇರೇಪಿಸುವ ಮತ್ತು ಉನ್ನತಿಗೇರಿಸುವ ವಿಷಯಗಳನ್ನು ಕೇಂದ್ರೀಕರಿಸಿದ್ದಾರೆ.” ಎಂದರು.
ಆಚರಣೆಯ ಅಂಗವಾಗಿ ‘ಪಿಂಗಾರ’ ವತಿಯಿಂದ ಶ್ರೀ ಅನ್ನಪೂರ್ಣೇಶ್ವರಿ ಅಂಧರ ಕಲಾ ಸಂಘವು ಕಲೆ ಮತ್ತು ಸಂಸ್ಕೃತಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಅವರಿಗೆ ಈ ಪ್ರತಿಷ್ಠಿತ “ಹಾಡು ಹಕ್ಕಿ” ಪ್ರಶಸ್ತಿಯನ್ನು ನೀಡಲಾಯಿತು. ಬಿ. ಜೆ. ಪಿ. ದಕ್ಷಿಣ ಕನ್ನಡದ ಅಧ್ಯಕ್ಷ ಸತೀಶ್ ಕುಂಪಲ ಪ್ರಶಸ್ತಿ ಪ್ರದಾನ ಮಾಡಿ ರೇಮಂಡ್ ಡಿ’ಕುನ್ಹಾ ಅವರ ಸಮರ್ಪಣಾ ಮನೋಭಾವ ಮತ್ತು ತತ್ವಗಳನ್ನು ಶ್ಲಾಘಿಸಿದರು. ಸಮಾರಂಭದಲ್ಲಿ ವಿನ್‌ಸ್ಟನ್ ಸಿಕ್ವೇರಾ, ನಿಹಾನ್ ಸಿಕ್ವೇರಾ ಮತ್ತು ವಿಯೋಲಾ ಲೂಯಿಸ್ ಅವರ ಸಾಧನೆಗಳಿಗಾಗಿ ಗೌರವಿಸಲಾಯಿತು. ರೇಮಂಡ್ ಡಿ’ಕುನ್ಹಾ ಅತಿಥಿಗಳನ್ನು ಸ್ವಾಗತಿಸಿ, ರಿಯಾನಾ ಡಿಕುನ್ಹಾ ಕಾರ್ಯಕ್ರಮ ನಿರೂಪಿಸಿ, ಎಲಿಯಾಸ್ ಫೆರ್ನಾಂಡಿಸ್ ವಂದಿಸಿದರು.
ದಿನಾಂಕ 28 ಜುಲೈ 2024ರಂದು ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಸ್ಟ್ಯಾನಿ ಅಲ್ವಾರಿಸ್ “’ಚಾರೊಳಿ’ ಎಂದರೆ ನಾಲ್ಕು ಸಾಲುಗಳ ಸಾಹಿತ್ಯ. ಈ ನಾಲ್ಕು ಸಾಲುಗಳ ಸಾಹಿತ್ಯದಲ್ಲಿ ಎಲ್ಲಾ ವಿಷಯಗಳನ್ನು ಮನ ತಟ್ಟುವಂತೆ ಮಾಡುವ ಶಕ್ತಿ ಇದೆ. ಸಾಹಿತ್ಯ ಇದು ಜನರ ಮನೆ ಮಾತಾಗಿದೆ.” ಎಂದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ಧರ್ಮ ಪ್ರಾಂತದ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಾಗೂ ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ ಶುಭ ಹಾರೈಸಿದರು. ಅತಿಥಿಗಳಾಗಿ ಉದ್ಯಮಿಗಳಾದ ಟೈಟಸ್ ನೊರೊನ್ಹಾ, ನವೀನ್ ನಾಯಕ್ ಮತ್ತು ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೊಂಕಣಿ ಹಾಗೂ ಇತರ ಭಾಷೆಗಳಲ್ಲಿ ಹಲವಾರು ಸಾಹಿತ್ಯ ಕೃತಿ ರಚಿಸಿದ ಕೊಂಕಣಿ ಕವಿ ರಿಚಾರ್ಡ್ ಲಸ್ರಾದೊ ಅವರನ್ನು ಸಮ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೇರಳ, ಗೋವಾ, ಆಂಧ್ರ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಹಲವು ಮಂದಿ ಕವಿಗಳು ಹಾಗೂ ‘ಚಾರೊಳಿ’ಯಲ್ಲಿ ನಿಪುಣರಾದ ಸಾಹಿತಿಗಳು ಭಾಗವಹಿಸಿದ್ದರು. ಅಖಿಲ ಭಾರತೀಯ ಕೊಂಕಣಿ ‘ಚಾರೊಳಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರೈಮಂಡ್ ಡಿ’ಕುನ್ಹಾ ಸ್ವಾಗತಿಸಿದರು. ರಿಯಾನಾ ಡಿ’ಕುನ್ಹಾ ಮತ್ತು ಅರವಿಂದ ಶಾನುಭೋಗ್ ನಿರೂಪಿಸಿದರು.