ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಇದರ ‘ಸಿನ್ಸ್ 1999 ಶ್ವೇತಯಾನ-47’ ಕಾರ್ಯಕ್ರಮದ ಅಂಗವಾಗಿ ಗುರುಪರಂಪರಾ ಸಂಗೀತ ಸಭಾ ಕುಂದಾಪುರ ಇದರ 8ನೇ ವರ್ಷದ ‘ಗುರುಪೂರ್ಣಿಮಾ ಸಂಗೀತೋಪಾಸನಾ’ ಕಾರ್ಯಕ್ರಮ 28 ಜುಲೈ2024 ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಗುರು ದಂಪತಿಗಳಾದ ಸತೀಶ್ ಭಟ್ ಮಾಳಕೊಪ್ಪ ಹಾಗೂ ಪ್ರತಿಮಾ ಭಟ್ ಇವರನ್ನು ಗೌರವಿಸಿದ ಯಕ್ಷಗಾನದ ಪ್ರಸಿದ್ಧ ಕಲಾವಿದರಾದ ಕೊಂಡದಕುಳಿ ರಾಮಚಂದ್ರ ಹೆಗಡೆ ಮಾತನ್ನಾಡಿ “ನಮ್ಮ ದೇಶದ ಮಣ್ಣಿನ ವಿಶಿಷ್ಟ ಪರಂಪರೆ ಎಂದರೆ ಗುರುವನ್ನು ಗೌರವಿಸುವ ಶಿಷ್ಟ ಪರಂಪರೆ. ಗುರುವಿನಿಂದ ಉಪಕೃತರಾದಾಗ ಅವರಿಗೆ ಕೃತಜ್ಞತಾ ಪೂರ್ವಕವಾಗಿ ಗೌರವವನ್ನು ಸಲ್ಲಿಸಲೇ ಬೇಕು. ಇದು ಸನಾತನ ಸಂಸ್ಕೃತಿ. ಭೂಮಿ ಪೂಜೆಯೋ, ದೇವರ ಪೂಜೆಯೋ, ಗುರುಪೂಜೆಯೋ, ಗೋಪೂಜೆಯೋ, ಆಯುಧ ಪೂಜೆಯೋ ಹೀಗೆ ಹಲವಾರು ವಿಧದ ಪೂಜೆ ಯಾಕೆಂದರೆ ಅದು ಕೃತಜ್ಞತಾ ಆಂತರಂಗಿಕ ಭಾವ. ಪ್ರಪಂಚದಲ್ಲಿ ಮೊದಲು ಹುಟ್ಟಿದ್ದೇ ಓಂಕಾರನಾದ. ಪ್ರಪಂಚದ ಸರ್ವವೂ ನಾದಕ್ಕೆ ಸೋಲುತ್ತದೆ. ಮಾತೃ ಸ್ಥಾನದಲ್ಲಿ ಸಂಗೀತ ನಿಲ್ಲುತ್ತದೆ. ಸಂಗೀತವೇ ಪ್ರಪಂಚದಲ್ಲಿ ಮೊದಲು ಹುಟ್ಟಿದ್ದು. ಸಂಗೀತ, ಪರಂಪರೆ, ಸಾಹಿತ್ಯ, ಗೌರವಗಳೆಲ್ಲ ಸ್ಥಾಯಿಯಾಗಿ ಉಳಿಸಿಕೊಂಡು ಹೋದರೆ ಅದು ಸವಿಯಾದ ರೀತಿಯಲ್ಲಿ ಸಮಾಜದಲ್ಲಿ ಬಿಂಬಿತವಾಗುತ್ತದೆ.” ಎಂದರು.
ಗುರುವಂದನೆ ಸ್ವೀಕರಿಸಿ ಮಾತನಾಡಿದ ಸತೀಶ್ ಭಟ್ ಮಾಳಕೊಪ್ “ಪರಂಪರೆಯ ಚೌಕಟ್ಟಿನೊಳಗೆ ಬದುಕುವ ಶಿಷ್ಠಾಚಾರ ನನ್ನದು. ಸಂಗೀತವು ಬಹಳ ಹಿಂದಿನಿಂದಲೂ ನಡೆದು ಬಂದ ದಾರಿ. ಅದನ್ನು ಬದಲಾಯಿಸುವ ಹಕ್ಕು ನನಗಿಲ್ಲ. ಶೃತಿ ಬದ್ಧತೆ ಹಾಗೂ ಲಯ ಬದ್ಧತೆ ಹಾಡುವಿಕೆಗೆ ಅತ್ಯಗತ್ಯ. ಇದು ನಮ್ಮ ಗರಡಿಯಲ್ಲಿ ಬೆಳೆದ ಮಕ್ಕಳು ಅನುಸರಿಸುತ್ತಿರುವುದು ನನಗೆ ಅತ್ಯಂತ ಖುಷಿ ಕೊಟ್ಟಿದೆ.” ಎಂದರು.
ಕಾರ್ಯಕ್ರಮದಲ್ಲಿ ಶಿಷ್ಯರುಗಳಾದ ನಾಗರಾಜ್ ಬೈಂದೂರು, ವೀಣಾ ನಾಯಕ್, ನೇಹಾ ಹೊಳ್ಳ, ಪಂಚಮಿ ವೈದ್ಯ, ಇನ್ನಿತರರು ಉಪಸ್ಥಿತರಿದ್ದರು. ಬಳಿಕ ಶಿಷ್ಯ ಬಳಗದಿಂದ ‘ಸಂಗೀತೋಪಾಸನಾ’ ಕಾರ್ಯಕ್ರಮವು ರಂಗದಲ್ಲಿ ಪ್ರಸ್ತುತಿಗೊಂಡಿತು.