ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ನೃತ್ಯ ಕಾರ್ಯಕ್ರಮ ನೃತ್ಯಾಂತರಂಗದ 115ನೇ ಸರಣಿಯಲ್ಲಿ ಸಂಸ್ಥೆಯ ಕಲಾವಿದೆ ಕು. ಪ್ರಣಮ್ಯ ಪಾಲೆಚ್ಚಾರು ಇವರ ಪ್ರಥಮ ಏಕವ್ಯಕ್ತಿ ಭರತನಾಟ್ಯ ಕಾರ್ಯಕ್ರಮ ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ 21 ಜುಲೈ 2024ರಂದು ನಡೆಯಿತು. ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಿ.ಜಿ.ಭಟ್ ಇವರು ಅಭ್ಯಾಗತರಾಗಿ ಆಗಮಿಸಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಸಂಸ್ಥೆಯ ವಿದ್ಯಾರ್ಥಿಗಳಾದ ಕುಮಾರಿ ನಿಶಿ, ಪ್ರೀತಿ ಪ್ರಭು, ಲಾಸ್ಯ ಹಾಗೂ ಆಪ್ತ ಚಂದ್ರಮತಿ ಮುಳಿಯ ಪ್ರಾರ್ಥನೆಗೈದು, ಕುಮಾರಿ ಆದ್ಯ ಮತ್ತು ಮನಿಹ ಕಲಾವಿದರ ಮತ್ತು ಅಭ್ಯಾಗತರ ಪರಿಚಯ ಮಾಡಿದರು. ಕುಮಾರಿ ಆದ್ಯ ಭಟ್ ಪಂಚಾಂಗ ವಾಚನ, ವಿದ್ವಾನ್ ಗಿರೀಶ್ ಕುಮಾರ್ ಶಂಖನಾದಗೈಯುವುದರೊಂದಿಗೆ ಕಾರ್ಯಕ್ರಮದ ನಿರೂಪಣೆ ಮಾಡಿದವರು ಕುಮಾರಿ ವಿಭಾಶ್ರೀ. ವಿದುಷಿ ಅಕ್ಷತ ಕೆ. ‘ವೀರ ರಸ’ದ ಬಗ್ಗೆ ಪ್ರಾತ್ಯಕ್ಷಿಕೆ ನೀಡುವುದರೊಂದಿಗೆ ಗುರು ದೀಪಕ್ ಕುಮಾರ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಕುಮಾರಿ ಪ್ರಣಮ್ಯ ಪಾಲೆಚ್ಚಾರು ಇವರ ಭರತನಾಟ್ಯ ಕಾರ್ಯಕ್ರಮದಲ್ಲಿ ನಾರಾಯಣ ಶ್ಲೋಕ, ಸರಸ್ವತಿಯ ಸ್ತುತಿ, ಕಾಂಭೋಜಿ ರಾಗದ ಪದವರ್ಣ, ಇದೇನೇ ಸಖಿ ಎಂಬ ಜಾವಳಿ ಹಾಗೂ ಮಧುವಂತಿರಾಗದ ಸುಂದರವಾದ ತಿಲ್ಲಾನ ಪ್ರಸ್ತುತಪಡಿಸಲಾಯಿತು. ಅಭ್ಯಾಗತರಾದ ಪ್ರೊ. ವಿ.ಜಿ. ಭಟ್ ಇವರು ಲಲಿತ ಕಲೆಗಳ ಮಹತ್ವದ ಬಗ್ಗೆ ಹಾಗೂ ಮೂಕಾಂಬಿಕಾ ಅಕಾಡೆಮಿಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಈ ಸಂಸ್ಥೆಯ ಮುಖ್ಯಸ್ಥರೊಂದಿಗೆ ತಮಗೆ ಇರುವ ಬಹುಕಾಲದ ಒಡನಾಟದ ಬಗ್ಗೆ ಸ್ಮರಿಸಿಕೊಂಡರು.
ಸಭಿಕರ ಪರವಾಗಿ ಶ್ರೀಮತಿ ಆಶಾ ಬೆಳ್ಳಾರೆ, ವೀಣಾ ಸರಸ್ವತಿ ನಿಡ್ವಣ್ಣಾಯ, ಕುಮಾರಿ ವರ್ಷ, ವಿದುಷಿ ವಸುಧಾ ಜಿ.ಎನ್. ಮತ್ತು ಶ್ರೀ ಶ್ಯಾಮ್ ಭಟ್ ಇವರು ಅಭಿಪ್ರಾಯ ಹಂಚಿಕೊಂಡರು. ಕಲಾವಿದೆ ಪ್ರಣಮ್ಯ ಮತ್ತು ಅವಳ ಅಜ್ಜ, ಹಿರಿಯ ಯಕ್ಷಗಾನ ಭಾಗವತರಾದ ಗೋವಿಂದ ನಾಯಕ್ ತಾವು ಈ ನೃತ್ಯಾಂತರಂಗ ಸರಣಿಯ ಸತ್ಪರಿಣಾಮಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಈ ಕಾರ್ಯಕ್ರಮವು ಹಿಮ್ಮೇಳ ಸಹಿತವಾದ ಪ್ರಸ್ತುತಿಯಾಗಿದ್ದು, ನಟುವಾಂಗ ಹಾಗೂ ನಿರ್ದೇಶನ ಗುರು ದೀಪಕ್ ಕುಮಾರ್, ಹಾಡುಗಾರಿಕೆ ವಿದುಷಿ ಪ್ರೀತಿಕಲಾ, ಮೃದಂಗ ಶ್ರೀ ಗಿತೇಶ್ ಗೋಪಾಲಕೃಷ್ಣನ್ ನೀಲೇಶ್ವರ ಮತ್ತು ಕೊಳಲು ಶ್ರೀ ರಾಜಗೋಪಾಲನ್ ಕಾಞಂಗಾಡ್ ಇವರುಗಳು ಹಿಮ್ಮೇಳದಲ್ಲಿ ಸಹಕರಿಸಿದರು.