ಕುಂದಾಪುರ: ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ವತಿಯಿಂದ ನೀಡಲಾಗುವ ‘ಡಾ. ಎಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ’ಗೆ ಕತೆಗಾರ ದಯಾನಂದ ಅವರ ‘ಬುದ್ಧನ ಕಿವಿ’ ಕಥಾ ಸಂಕಲನ ಆಯ್ಕೆಯಾಗಿದೆ. ಪ್ರಶಸ್ತಿಯು ರೂ.15,000/- ನಗದು, ಬೆಳ್ಳಿ ಫಲಕ ಒಳಗೊಂಡಿದೆ. ಈ ಸಮಿತಿಗೆ ಲೇಖಕರಾದ ಎಚ್.ಆರ್. ಸುಜಾತ, ಪ್ರೊ. ಕೆ. ಫಣಿರಾಜ್, ಟಿ.ಎಸ್. ಗೊರವರ ನಿರ್ಣಾಯಕರಾಗಿದ್ದರು.
ದಯಾನಂದ :
14 ಏಪ್ರಿಲ್ 1988ರಂದು ನಾಗಮಂಗಲ ತಾಲ್ಲೂಕಿನ ಬೆಳ್ಳೂರಿನಲ್ಲಿ ಜನಿಸಿದ ಇವರು ಓದಿ ಬೆಳೆದದ್ದು ಬೆಂಗಳೂರಿನಲ್ಲಿ. ಕನ್ನಡ ಸಾಹಿತ್ಯ, ಇಂಗ್ಲೀಷ್ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಗಳಿಸಿರುವ ಇವರು ‘ಸಮಯ ಟಿ.ವಿ.’, ‘ಪ್ರಜಾವಾಣಿ’ ಮತ್ತು ‘ಸಮಾಚಾರ.ಕಾಂ’ ಮುಂತಾದ ಸುದ್ದಿಸಂಸ್ಥೆಗಳಲ್ಲಿ ಒಂದು ದಶಕಗಳ ಕಾಲ ಪತ್ರಿಕೋದ್ಯಮದ ಅನುಭವ ಪಡೆದಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಮಾಧ್ಯಮ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
2017ರಲ್ಲಿ ಪ್ರಕಟಗೊಂಡ ‘ದೇವರು ಕಚ್ಚಿದ ಸೇಬು’ ಇವರ ಪ್ರಥಮ ಕಥಾ ಸಂಕಲನ. 2005ರಲ್ಲಿ ಪ್ರಕಟಗೊಂಡ ‘ಬಾಳಪೂರ್ಣ’ ನಾಟಕ ‘ಛಂದಪುಸ್ತಕ’ ಬಹುಮಾನ ಪಡೆದಿದೆ. ಶ್ರೀಯುತರು ರಚಿಸಿದ ಕತೆಗಳಿಗ ಗುಲ್ಬರ್ಗ ವಿಶ್ವವಿದ್ಯಾಲಯದ ‘ಚಿನ್ನದ ಪದಕ’, ‘ಸಂಕ್ರಮಣ ಕಥಾ ಪುರಸ್ಕಾರ’, ಪ್ರಜಾವಾಣಿ ‘ದೀಪಾವಳಿ ಕಥಾಸ್ಪರ್ಧೆ’ಯ ಬಹುಮಾನ, ‘ಸಮಾಜಮುಖಿ ಕಥಾ ಪುರಸ್ಕಾರ’, ‘ಸ್ಟೋರಿಬ್ರೂಕ್’ ಸಪ್ನ ಬುಕ್ ಹೌಸ್ ಕಥಾ ಬಹುಮಾನ ಲಭಿಸಿದೆ. ಇವರ ಕತೆಗಳು ಎರಡು ಬಾರಿ ಟೊಟೊ ಸಾಹಿತ್ಯ ಪುರಸ್ಕಾರದ ಲಾಂಗ್ಲಿಸ್ಟ್ನಲ್ಲಿದ್ದವು. ಇವರ ಕತೆಯೊಂದು ವಿಜಯ ಕರ್ನಾಟಕ ಕಥಾಸ್ಪರ್ಧೆಯ ಶಾರ್ಟ್ಲಿಸ್ಟ್ನಲ್ಲಿತ್ತು.
‘ಬುದ್ಧನ ಕಿವಿ’ ಇವರ ಎರಡನೇ ಕಥಾ ಸಂಕಲನವಾಗಿದ್ದು, ಈ ಕಥಾ ಸಂಕಲನವು ‘ಬಸವರಾಜ ಕಟ್ಟೀಮನಿ ಯುವ ಪುರಸ್ಕಾರ’, ‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’, ಕನ್ನಡ ಸಾಹಿತ್ಯ ಪರಿಷತ್ತಿನ ‘ಡಾ.ವೀಣಾ ಶಾಂತೇಶ್ವರ ದತ್ತಿ ಪುರಸ್ಕಾರ’, ‘ವೀಚಿ ಯುವ ಸಾಹಿತ್ಯ ಪ್ರಶಸ್ತಿ’ಗೆ ಭಾಜನವಾಗಿದೆ.