ಉಡುಪಿ : ಸರಿಗಮ ಭಾರತಿ ಸಂಗೀತ ವಿದ್ಯಾಲಯದ ‘ರಜತ ಸಂಭ್ರಮ’ ಮಹೋತ್ಸವದ ಕಾರ್ಯಕ್ರಮವು ದಿನಾಂಕ 01 ಆಗಸ್ಟ್ 2024ರಂದು ಉಡುಪಿಯ ಯಕ್ಷಗಾನ ಕಲಾರಂಗ- ಇನ್ಫೋಸಿಸ್ ಫೌಂಡೇಶನ್ ಐ.ವೈ.ಸಿ. ಸಭಾಂಗಣದಲ್ಲಿ ಕೆ.ಆರ್. ರಾಘವೇಂದ್ರ ಆಚಾರ್ಯ ಮಣಿಪಾಲ ಅವರು ಪ್ರಾರ್ಥನಾ ಸ್ತುತಿಯೊಂದಿಗೆ ಪ್ರಾರಂಭವಾಯಿತು. ಉಡುಪಿ ಯಕ್ಷಗಾನ ಕಲಾರಂಗದ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಕರ್ನಾಟಕ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಇವರು ಮಾತನಾಡಿ “ಭಾರತೀಯ ಕಲಾಪ್ರಕಾರಗಳು ಕೇವಲ ಮನೋರಂಜನೆಗಾಗಿ ಅಲ್ಲ, ಅವು ಭಗವಂತನ ಜೊತೆ ಅನುಸಂಧಾನ ಮಾಡುವ ಮಾಧ್ಯಮವೂ ಹೌದು. ಭಾರತದ ತಾಯಿ ಬೇರು ನಮ್ಮ ಕಲೆ, ಸಂಸ್ಕೃತಿಯ ಪರಂಪರೆಯಲ್ಲಿ ಭದ್ರವಾಗಿ ಅಡಗಿದೆ. ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಇಂತಹ ಸಂಸ್ಥೆಗಳಿಂದ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಬದಲಾವಣೆ ಬೇಕು ಎಂಬ ಪ್ರಜ್ಞೆ ಸಮಾಜದಲ್ಲಿ ಮೂಡುತ್ತಿರುವುದು ಸಂತಸದ ವಿಷಯ” ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಉಡುಪಿಯ ಹಿರಿಯ ಸಾಮಾಜಿಕ ಕಾರ್ಯಕರ್ತರು, ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲರು, ಸಾಂಸ್ಕೃತಿಕ ಸಂಸ್ಥೆಗಳ ಖಜಾಂಜಿಯಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ. ಕೆ. ಸದಾಶಿವ ರಾವ್ ಅವರಿಗೆ ‘ಕಲಾಪೋಷಕ’ ಗೌರವಾರ್ಪಣೆಯನ್ನು ನೀಡಲಾಯಿತು. ಪ್ರೊ. ಕೆ.ಸದಾಶಿವ ರಾವ್ ಒಬ್ಬ ಉತ್ತಮ ಪ್ರಾಧ್ಯಾಪಕರು, ಆಡಳಿತಗಾರರು, ಪದವಿ ವಿದ್ಯಾರ್ಥಿಗಳಿಗೆ ಅವರು ಬರೆದ ಟ್ಯಾಕ್ಸೇಶನ್ ಪಠ್ಯವು 30ಕ್ಕೂ ಹೆಚ್ಚು ಬಾರಿ ಪುನರ್ ಮುದ್ರಣಗೊಂಡಿದೆ. ಉಡುಪಿಯ ಯಕ್ಷಗಾನ ಕಲಾರಂಗ, ರಾಗಧನ, ಸರಿಗಮ ಭಾರತಿ, ಹವ್ಯಕಸಭಾ ಅಲ್ಲದೆ ಇನ್ನೂ ಹಲವಾರು ಸಂಘಟನೆಗಳ ಲೆಕ್ಕಪರಿಶೋಧಕರಾಗಿ ಸೇವೆ ಸಲ್ಲಿಸಿದ ಸಾಮಾಜಿಕ ಕಾರ್ಯಕರ್ತರಿವರು. ಹಲವಾರು ಮಂದಿಯ ವೈಯಕ್ತಿಕ ಲೆಕ್ಕ ಪತ್ರದ ನಿರ್ವಹಣೆಯನ್ನೂ ಕೂಡ ಉಚಿತವಾಗಿ ಕಳೆದ ಹಲವು ದಶಕಗಳಿಂದ ನಿರ್ವಹಿಸುತ್ತಾ ಬಂದಿರುತ್ತಾರೆ. ಯಕ್ಷಗಾನ ಕಲಾರಂಗದಲ್ಲಿಯೂ ಕಳೆದ 20 ವರ್ಷಗಳಿಂದ ವಿದ್ಯಾಪೋಷಕ್‌ನ ಲೆಕ್ಕಪತ್ರ ನಿರ್ವಹಣೆ ಮಾಡುತ್ತಿದ್ದ ಇವರು ಕಳೆದ ವರ್ಷದಿಂದ ಇಡೀ ಸಂಸ್ಥೆಯ ಕೋಶಾಧಿಕಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಇವರಿಗೆ ಸೇವಾಭೂಷಣ ಪ್ರಶಸ್ತಿ ನೀಡಿ ಕಲಾರಂಗ ಗೌರವಿಸಿತ್ತು.
ಬಳಿಕ ಕೆ.ಎಸ್. ವಿಷ್ಣುದೇವ್ ಇವರಿಂದ ನಡೆದ ರಾಗಂ..ತಾನಂ…ಪಲ್ಲವಿ ಸಹಿತ ಕರ್ನಾಟಕ ಸಂಗೀತ ಕಛೇರಿಗೆ ವಯೊಲಿನ್‌ನಲ್ಲಿ ವಿ.ಎಸ್. ಗೋಕುಲ್ ಆಲಂಗೋಡೆ, ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಹಾಗೂ ಘಟಂನಲ್ಲಿ ಶ್ರೀಜಿತ್ ವೆಲ್ಲತ್ತಂಜೂರ್ ಸಹಕರಿಸಿದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಅಭಿನಂದಿಸಿದರು. ಸರಿಗಮ ಭಾರತಿ ಸಂಗೀತ ವಿದ್ಯಾಲಯದ ನಿರ್ದೇಶಕ ಡಾ. ಎಚ್.ಎನ್. ಉದಯಶಂಕರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾಲಯದ ಗುರು ಉಮಾಶಂಕರಿ ವಂದನಾರ್ಪಣೆಗೈದರು. ಶಿಲ್ಪಾ ಜೋಷಿ ಕಾರ್ಯಕ್ರಮ ನಿರೂಪಿಸಿದರು.