ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘದಿಂದ ನೀಡಲಾಗುವ 2024ನೇ ಸಾಲಿನ ನಾಗಮಣಿ ಎಸ್. ರಾವ್ ದತ್ತಿ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ ಎಚ್.ಎಲ್. ಸೀತಾದೇವಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ರೂ.10,000/- ನಗದು ಹಾಗೂ ಸ್ಮರಣಿಕೆಗಳನ್ನೊಳಗೊಂಡಿರುತ್ತದೆ. ದಿನಾಂಕ 11 ಆಗಸ್ಟ್ 2024ರಂದು ಬಸವನಗುಡಿಯ ಅಬಲಾಶ್ರಮದ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಮಾಧ್ಯಮ ಅಕಾಡಮಿಯ ಅಧ್ಯಕ್ಷರಾದ ಆಯೇಷಾ ಖಾನಂ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತೆ ಸಿ.ಜಿ. ಮಂಜುಳಾ ಅವರು ‘ಮಹಿಳೆ: ಪತ್ರಿಕೋದ್ಯಮ ಮತ್ತು ಸೃಜನಶೀಲ ಸಾಹಿತ್ಯ’ ಎಂಬ ವಿಷಯದ ಕುರಿತು ವಿಶೇಷ ದತ್ತಿ ಉಪನ್ಯಾಸ ನೀಡಲಿರುವರು.
ಟಿ.ಎಸ್.ಆರ್. ಪ್ರಶಸ್ತಿ ಪುರಸ್ಕೃತರಾದ ನಾಗಮಣಿ ಎಸ್. ರಾವ್. ಅವರು ಆಕಾಶವಾಣಿಯಲ್ಲಿ ಸುಧೀರ್ಘಕಾಲ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಕರ್ನಾಟಕ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆಯೂ ಆಗಿದ್ದ ಇವರು ಸಂಘದಲ್ಲಿ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಕನ್ನಡ ಪತ್ರಿಕಾ ಕ್ಷೇತ್ರ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪತ್ರಕರ್ತೆಯೊಬ್ಬರನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಬೇಕೆಂಬುದು ಇವರ ಆಶಯವಾಗಿದೆ. ಈ ಪ್ರಕಾರ ಆಕಾಶವಾಣಿ ಮತ್ತು ಕನ್ನಡ ಪ್ರಭ ಪತ್ರಿಕೆಯಲ್ಲಿ ಸುಧೀರ್ಘಕಾಲ ಕಾರ್ಯನಿರ್ವಹಿಸಿದ ಎಚ್.ಎಲ್. ಸೀತಾದೇವಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಡಾ. ಎಚ್.ಎಲ್. ಪುಷ್ಪ ತಿಳಿಸಿದ್ದಾರೆ. ಆಯ್ಕೆ ಸಮಿತಿಯಲ್ಲಿ ಹಿರಿಯ ಪತ್ರಕರ್ತೆಯರಾದ ಡಾ. ಆರ್. ಪೂರ್ಣಿಮಾ ಮತ್ತು ಸಿ.ಜಿ. ಮಂಜುಳಾ ಇದ್ದರು.