ಕಾಸರಗೋಡು : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ, ಶಂಪಾ ಪ್ರತಿಷ್ಠಾನ (ರಿ.) ಬೆಂಗಳೂರು ಮತ್ತು ವಿಕಾಸ ಮೀಯಪದವು ಇವರ ಸಂಯುಕ್ತ ಆಶ್ರಯದಲ್ಲಿ ‘ಡಾ. ನಾ. ಮೊಗಸಾಲೆ ಪೌರಾಭಿನಂದನೆ ಹಾಗೂ ಸಾಹಿತ್ಯ ಸಮೀಕ್ಷೆ’ ಕಾರ್ಯಕ್ರಮವನ್ನು ದಿನಾಂಕ 10-08-2024ರಂದು ಬೆಳಗ್ಗೆ 10-00 ಗಂಟೆಗೆ ಮೀಯಪದವು ಶ್ರೀ ವಿದ್ಯಾವರ್ಧಕ ಉನ್ನತ ಪ್ರೌಢ ಶಾಲೆಯ ನಾರಾಯಣೀಯಂ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷರಾದ ಡಾ. ರಾಮಾನಂದ ಬನಾರಿ ಇವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಡಾ. ಮಹೇಶ್ ಜೋಶಿ ಇವರು ಉದ್ಘಾಟನೆ ಮಾಡಲಿದ್ದಾರೆ. ‘ಸಾಹಿತ್ಯ ಸಮೀಕ್ಷೆ’ ಗೋಷ್ಠಿ 1ರಲ್ಲಿ ಮೊಗಸಾಲೆಯವರ ಕಾವ್ಯದ ಬಗ್ಗೆ ಸಾಹಿತಿ ಮತ್ತು ವಿಮರ್ಶಕ ಶ್ರೀ ರಮೇಶ್ ಭಟ್ ಬೆಳಗೋಡು, ಕಾದಂಬರಿಗಳ ಬಗ್ಗೆ ವಿಮರ್ಶಕ ಕಾದಂಬರಿಕಾರ ಡಾ. ಬಿ. ಜನಾರ್ದನ ಭಟ್, ಸಣ್ಣ ಕತೆಗಳ ಬಗ್ಗೆ ಸಾಹಿತಿ ಡಾ. ಸುಭಾಷ್ ಪಟ್ಟಾಜೆ ಮಾಹಿತಿ ನೀಡಲಿರುವರು. ಮಧ್ಯಾಹ್ನ 1-00 ಗಂಟೆಗೆ ಶ್ರೀಮತಿ ಸಂಧ್ಯಾ ಗೀತಾ ಬಾಯಾರು ಮತ್ತು ಬಳಗದವರಿಂದ ಮೊಗಸಾಲೆ ಕಾವ್ಯ ಗಾಯನ ಪ್ರಸ್ತುತಗೊಳ್ಳಲಿದೆ. ಗೋಷ್ಠಿ 2ರಲ್ಲಿ ‘ನೀರು’ ಕಾದಂಬರಿಯ ಬಗ್ಗೆ ಕು. ಸ್ವಾತಿ ಕೆ. ಪೊನ್ನೆತೋಡು, ‘ಭಾರತ ಕಥಾ’ ಕಾದಂಬರಿಯ ಬಗ್ಗೆ ಕು. ಅನನ್ಯ ಬೇಕಲ, ‘ಧರ್ಮಯುದ್ಧ’ ಕಾದಂಬರಿಯ ಬಗ್ಗೆ ಕು. ಪಲ್ಲವಿ ಕೆ. ಮಲ್ಲ ಇವರುಗಳು ಮಾತನಾಡಲಿದ್ದಾರೆ. 2-45 ಗಂಟೆಗೆ ಮೊಗಸಾಲೆಯವರೊಂದಿಗೆ ಲೋಕಾಭಿರಾಮ ಮಾತುಕತೆ ಮತ್ತು 3-30 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಇವರು ವಹಿಸಲಿದ್ದು, ಸರಕಾರಿ ಕಾಲೇಜು ಬೆಟ್ಟಂಪಾಡಿ ಇದರ ಪ್ರಾಂಶುಪಾಲರಾದ ಡಾ. ವರದರಾಜ್ ಚಂದ್ರಗಿರಿ ಇವರು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.