ಬೆಂಗಳೂರು: ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಈ ಬಾರಿ ಶಿಷ್ಯ ವೇತನಕ್ಕೆ ಅಭ್ಯರ್ಥಿಗಳನ್ನು ಭಿನ್ನ ರೀತಿಯಲ್ಲಿ ಆಯ್ಕೆ ಮಾಡಲಿದೆ. ಸಂಗೀತ, ನೃತ್ಯ ಅಭ್ಯರ್ಥಿಗಳಿಗೆ ಆರ್ಥಿಕ ಹೊರೆಯಾಗಬಾರದು ಎಂಬ ಉದ್ದೇಶದಿಂದ ಈ ಬಾರಿ ಶಿಷ್ಯ ವೇತನಕ್ಕೆ ಅಭ್ಯರ್ಥಿಗಳು ತಾವಿರುವ ಸ್ಥಳದಲ್ಲೇ ವೀಡಿಯೋ ಚಿತ್ರೀಕರಣ ಮಾಡಿ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ ತಿಳಿಸಿದ್ದಾರೆ.
ಕಳೆದ 2 ವರ್ಷಗಳಿಂದ ಅನೇಕ ಕಾರಣಗಳಿಂದಾಗಿ ಶಿಷ್ಯವೇತನ ನೀಡಿರಲಿಲ್ಲ. ಈಗ ಎರಡೂ ವರ್ಷದ್ದು ಸೇರಿಸಿ 200 ಮಂದಿಗೆ ತಲಾ 10 ಸಾವಿರ ರೂಪಾಯಿ ನೀಡಲಾಗುತ್ತಿದೆ. ಈ ಹಿಂದೆ 16 ರಿಂದ 24ರ ವಯೋಮಿತಿಯವರನ್ನು ಸಂದರ್ಶನ ಮಾಡಿ ಶಿಷ್ಯ ವೇತನಕ್ಕೆ ಆಯ್ಕೆ ಮಾಡಲಾಗುತ್ತಿತ್ತು. ಆದರೆ ದೂರದೂರುಗಳಿಂದ ಬರುವವರಿಗೆ ಬಸ್ ಪ್ರಯಾಣ, ತಂಗುವ ವ್ಯವಸ್ಥೆ ಸೇರಿದಂತೆ ಹಲವು ರೀತಿಯ ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ಅಕಾಡೆಮಿ ಈ ನಿರ್ಧಾರಕ್ಕೆ ಬಂದಿದೆ. ಆಯಾ ಕಲಾ ಪ್ರಕಾರಕ್ಕೆ ಅನುಗುಣವಾಗಿ ಅಭ್ಯರ್ಥಿಗಳು ವಿಡಿಯೋ ಚಿತ್ರೀಕರಿಸಿ ಕಳುಹಿಸಿ ಕೊಟ್ಟ ಪೆನ್‌ಡೈವ್ ಅನ್ನು ತೀರ್ಪುಗಾರರು ಪರಿಶೀಲಿಸಿ ಶಿಷ್ಯವೇತನಕ್ಕೆ ಆಯ್ಕೆ ಮಾಡಲಿದ್ದಾರೆ.