ಸುರತ್ಕಲ್: ಅಗರಿ ಪ್ರಶಸ್ತಿ ಪ್ರದಾನ, ಅಗರಿ ರಘುರಾಮ ಸನ್ಮಾನ ಹಾಗೂ ಅಗರಿ ಸಂಸ್ಮರಣೆ ಕಾರ್ಯಕ್ರಮವು 28 ಜುಲೈ 2024ರ ಭಾನುವಾರದಂದು ಹೊಸಬೆಟ್ಟು ಇಲ್ಲಿನ ನವಗಿರಿ ಸಭಾ ಭವನದಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಅಗರಿ ಪ್ರಶಸ್ತಿಯನ್ನು ಅಭಿಜ್ಞ ಯಕ್ಷಗಾನ ಭಾಗವತ ಪುತ್ತಿಗೆ ರಘುರಾಮ ‘ಹೊಳ್ಳ ಅವರಿಗೆ ಹಾಗೂ ಅಗರಿ ರಘುರಾಮ ಸನ್ಮಾನ ಪುರಸ್ಕಾರವನ್ನು ಉಡುಪಿಯ ಕಲೆ ಮತ್ತು ಸಮಾಜ ಸೇವಾ ಸಂಸ್ಥೆಯಾದ ‘ಯಕ್ಷಗಾನ ಕಲಾರಂಗ’ಕ್ಕೆ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಆಶೀರ್ವಚನ ನೀಡಿದ ಹರಿನಾರಾಯಣದಾಸ ಆಸ್ರಣ್ಣ “ಯಕ್ಷಗಾನ ರಂಗಕ್ಕೆ ಅಗರಿ ಶ್ರೀನಿವಾಸ ಭಾಗವತರು ಹಾಗೂ ರಘುರಾಮ ಭಾಗವತರು ನೀಡಿದ ಸೇವೆ ಸ್ಮರಣೀಯ, ಶ್ರೀ ದೇವೀ ಮಹಾತ್ಮೆ ಸಾವಿರಾರು ಸೇವೆಯನ್ನು ಕಂಡಿದೆ. ಕವಿಯಾಗಿ ಹಾಗೂ ನಿರ್ದೇಶಕರಾಗಿ ಯಕ್ಷಗಾನವನ್ನು ಬೆಳೆಸಿದ ಗರಿ ಇವರ ಅಗರಿ ಶೈಲಿ ಇಂದಿಗೂ ಉಳಿಸಿ ಕೊಂಡಿರುವುದು ಅವರ ಪ್ರಸಿದ್ದಿಗೆ ಸಾಕ್ಷಿಯಾಗಿದೆ. ಅವರ ಸವಿನೆನಪಿನಲ್ಲಿ ಪ್ರಶಸ್ತಿ ನೀಡುತ್ತಾ ಬರುತ್ತಿರುವುದು ಪ್ರಶಂಸನೀಯ.” ಎಂದರು
ಪ್ರಶಸ್ತಿ ಸ್ವೀಕರಿಸಿದ ಪುತ್ತಿಗೆ ರಘುರಾಮ ಹೊಳ್ಳ ಮಾತನಾಡಿ “ಅಗರಿ ಪ್ರಶಸ್ತಿಯನ್ನು ನಾನು ಆಶೀರ್ವಾದವಾಗಿ ಲಭಿಸಿದೆ ಎಂದು ಭಾವಿಸಿದ್ದೇನೆ.” ಎಂದರು.
ವಿದುಷಿ ಸುಮಂಗಲಾ ರತ್ನಾಕರ್ ಅಗರಿ ಸಂಸ್ಮರಣೆ ಹಾಗೂ ವಾದಿರಾಜ ಕಲ್ಲೂರಾಯ ಅಭಿನಂದನಾ ನುಡಿಗಳನ್ನಾಡಿದರು. ವೇದಿಕೆಯ ಅಗರಿ ರಾಘವೇಂದ್ರ ರಾವ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಉದ್ಯಮಿ ಶ್ರೀಪತಿ ಭಟ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉದ್ಯಮಿ ಶ್ರೀಕಾಂತ್ ಭಟ್ ಕುಮುಟಾ, ಗುರುರಾಜ ಆಚಾರ್ ಹೊಸಬೆಟ್ಟು, ಪೆರ್ಮುದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕ ರಮೇಶ್ ರಾವ್, ಕಲಾ ರಂಗದ ಗಂಗಾಧರ ರಾವ್, ಯುವಚೇತನ ಸಂಸ್ಥೆಯ ಅಧ್ಯಕ್ಷರಾದ ಪ್ರಶಾಂತ್ ರಾವ್ ಎಚ್. ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರಾದ ನಿಧಿಶಾ ಹೊಸಬೆಟ್ಟು, ರಾಘವೇಂದ್ರ ಎಚ್. ವಿ., ರಾಕೇಶ್ ಹೊಸಬೆಟ್ಟು ಇವರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ವಿತರಣೆ, ಅಭಿನಂದನಾ ಸಮಾರಂಭ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಪವನ್ ಮೈರ್ಪಾಡಿ ನಿರೂಪಿಸಿ, ಶ್ರೀನಿವಾಸ್ ಕುಳಾಯಿ ವಂದಿಸಿದರು.