ಕುಂಬಳೆ: ಕಣಿಪುರ ಮಿತ್ರ ಬಳಗ ಮತ್ತು ಕುಂಬಳೆ ಶ್ರೀಧರ ರಾವ್ ಅಭಿಮಾನಿ ಬಳಗದ ವತಿಯಿಂದ ಇತ್ತೀಚೆಗೆ ನಿಧನರಾದ ಕುಂಬಳೆ ಶ್ರೀಧರ ರಾವ್ ಇವರಿಗೆ ನುಡಿನಮನ ಹಾಗೂ ತಾಳಮದ್ದಳೆ ಕಾರ್ಯಕ್ರಮವು 28 ಜುಲೈ 2024ರಂದು ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ, ಅಂಕಣಕಾರ, ಕಲಾವಿದ ನಾ. ಕಾರಂತ ಪೆರಾಜೆ “ತೆಂಕುತಿಟ್ಟಿನ ಹಿರಿ ಪರಂಪರೆಯ ಮೇರು ಕಲಾವಿದರ ಸಾಲಿನಲ್ಲಿ ದಿ. ಕುಂಬಳೆ ಶ್ರೀಧರ ರಾವ್ ಇವರು ಗರತಿ ಪಾತ್ರಗಳಲ್ಲಿ ಅಚ್ಚೊತ್ತಿ, ಮಾದರಿ ಪಾತ್ರಗಳನ್ನು ಸೃಜಿಸಿದ ಸೃಷ್ಟಿಶೀಲ ಕಲಾವಿದ. ಶೇಣಿ, ಸಾಮಗ ಸಹಿತ ಗತ ಪರಂಪರೆಯ ಮೇರು ಕಲಾವಿದರ ಜೊತೆ ರಂಗದಲ್ಲಿ ಅಷ್ಟೇ ಸಮರ್ಥವಾಗಿ ಮೆರೆದು ಎಲ್ಲರ ಪ್ರೀತಿಗೆ ಪಾತ್ರರಾದವರು. ಅವರ ಕಲಾ ಬದುಕಿನ ಆಳ ಅಗಲ ಅತ್ಯಂತ ವಿಸ್ತಾರವಾದುದು.” ಎಂದು ಹೇಳಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ಮಾತನಾಡಿ “ನಮ್ಮ ನೆಲಕ್ಕೆ ಕೀರ್ತಿ ತಂದ ಕಲಾವಿದರನ್ನು ಸ್ಮರಿಸುವುದು ನಮ್ಮ ಬದುಕಿನ ಭಾಗವಾಗಬೇಕು.” ಎಂದು ನುಡಿದರು. ಕನ್ನಡ ಸಾಹಿತ್ಯ ಪರಿಷತ್‌ನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಶ್ರೀಧರ ರಾವ್ ಕುರಿತು ಮಾತನಾಡಿದರು.
ಅಭಿನಂದನಾ ಸಮಿತಿಯ ಅಧ್ಯಕ್ಷ ಭಗವಾನ್ ದಾಸ್ ಬೆಂಗಳೂರು ಮಾತನಾಡಿ “ಕುಂಬಳೆ ಶ್ರೀಧರ ರಾವ್ ಅವರ ಹುಟ್ಟೂರು ಕುಂಬಳೆಯಲ್ಲಿ ಅವರಿಗೆ ಸಾರ್ವಜನಿಕ ಅಭಿನಂದನೆಯೊಂದಿಗೆ ಗ್ರಂಥ ಸಮರ್ಪಣೆಗೆ ಸಿದ್ಧತೆ ನಡೆಯುತ್ತಿತ್ತು. ದಿಢೀರನೆ ಅವರು ಅಗಲಿದ ಹಿನ್ನೆಲೆಯಲ್ಲಿ ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ಕುಂಬಳೆಯಲ್ಲೇ ಸಂಸ್ಮರಣಾ ಗ್ರಂಥವಾಗಿ ಅದು ಬಿಡುಗಡೆಯಾಗಿ ಅವರ ದಿವ್ಯಾತ್ಮಕ್ಕೆ ಅರ್ಪಣೆ ಆಗಲಿದೆ. ಹುಟ್ಟೂರಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಸುವುದು ಅವರ ಕನಸಾಗಿತ್ತು. ಅದನ್ನು ಮರಣೋತ್ತರ ಈಡೇರಿಸಬೇಕಾದುದು ಅವರ ಹುಟ್ಟೂರ ಅಭಿಮಾನಿಗಳ ಧರ್ಮ.” ಎಂದವರು ನೆನಪಿಸಿದರು.
ಶ್ರೀ ಕುಮಾರಸ್ವಾಮಿ ಭಜನಾ ಮಂದಿರ ಸಭಾಗೃಹದ ಅಧ್ಯಕ್ಷ ನಾರಾಯಣ ರೈ, ಬಿ. ಕೆ. ಕೃಷ್ಣ ಟೈಲರ್ ನೀರ್ಚಾಲು ಉಪಸ್ಥಿತರಿದ್ದರು. ಡಾ. ಕೆ. ಕಮಲಾಕ್ಷ ಕಾಸರಗೋಡು, ಡಾ. ಬೇ. ಸಿ. ಗೋಪಾಲಕೃಷ್ಣ ಭಟ್, ವಿಶಾಲಾಕ್ಷ ಪುತ್ರಕಳ, ಪ್ರಸಂಗಕರ್ತ ಶೇಡಿಗುಮ್ಮೆ ವಾಸುದೇವ ಭಟ್, ಕಲಾವಿದ ಶಿವಶಂಕರ ದಿವಾಣ, ಕಥಾಕೀರ್ತನಗಾರ ಶಂನಾಡಿಗ ಕುಂಬಳೆ, ಡಿ. ಮಂಜುನಾಥ ಮಾನ್ಯ, ವಕೀಲ ಉದನೇಶ್ವರ, ಲಕ್ಷ್ಮಣ ಪ್ರಭು ಬದಿಯಡ್ಕ ಸಹಿತ ನೂರಾರು ಗಣ್ಯ ಕಲಾಭಿಮಾನಿಗಳು ಪಾಲ್ಗೊಂಡು ಶ್ರೀಧರ ಸ್ಮೃತಿಯೊಂದಿಗೆ ಅಗಲಿದ , ಮೇರು ಕಲಾವಿದನಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಕಣಿಪುರ ಮಾಸ ಪತ್ರಿಕೆಯ ಸಂಪಾದಕ ಹಾಗೂ ಲೇಖಕರಾದ ಎಂ. ನಾ. ಚಂಬಲ್ತಿಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.