ತೆಕ್ಕಟ್ಟೆ: ದಿಮ್ಸಾಲ್ ಫಿಲ್ಮ್ಸ್ ಹಾಗೂ ಧಮನಿ ಟ್ರಸ್ಟ್ ಸಹಕಾರದೊಂದಿಗೆ ‘ಸಿನ್ಸ್ 1999 ಶ್ವೇತಯಾನ-49’ರ ಕಾರ್ಯಕ್ರಮ ಗೋಪಾಡಿಯ ಗ್ರಾಮಸ್ಥರ ನೆರವಿನಿಂದ 7 ಆಗಸ್ಟ್ 2024ರಂದು ಗೋಪಾಡಿಯ ಕಾಂತೇಶ್ವರ ದೇಗುಲದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಯಕ್ಷಗಾನ ಕಲಾವಿದರಾದ ಗೋಪಾಡಿ ಶ್ರೀಪತಿ ಉಪಾಧ್ಯ “ಸಂಸ್ಥೆಯ ಬೆಳ್ಳಿ ಹಬ್ಬದ ಸಲುವಾಗಿ ಹಮ್ಮಿಕೊಂಡ ಶ್ವೇತಯಾನದ 108 ಕಾರ್ಯಕ್ರಮಗಳ ಸಂಕಲ್ಪದ 49ನೇ ಕಾರ್ಯಕ್ರಮವನ್ನು ಗೋಪಾಡಿಯಲ್ಲಿ ಮಿತ್ರರನ್ನೊಡಗೂಡಿಕೊಂಡು ಆಯೋಜಿಸಿದ್ದೇವೆ. ಶರವೇಗದಲ್ಲಿ ಕಾರ್ಯಕ್ರಮ ಸಂಯೋಜಿಸುವ ಮೂಲಕ ಯಶಸ್ವಿ ಕಲಾವೃಂದ ಈಗಾಗಲೇ ಗೆದ್ದಿದೆ. ಒಂದೆರಡು ಕಾರ್ಯಕ್ರಮ ಆಯೋಜನೆ ಮಾಡುವುದೇ ಬಹಳ ಕಷ್ಟ. ಇಂತಹ ಸಂದರ್ಭದಲ್ಲಿ ಕಿಂಚಿತ್ ಮೊತ್ತವನ್ನು ಪಡೆದು ಅದ್ದೂರಿಯ ಕಾರ್ಯಕ್ರಮ ಕೊಟ್ಟು ನಿರ್ಗಮಿಸುವ ಸಂಸ್ಥೆಯನ್ನು ಮೆಚ್ಚಲೇ ಬೇಕು. ಅಸಾಮಾನ್ಯ ಯಕ್ಷ ಕಲೆಯನ್ನು ಮಕ್ಕಳು ಹಾಗೂ ಅತಿಥಿ ಕಲಾವಿದರನ್ನು ಕೂಡಿಕೊಂಡು ಪ್ರಾಯೋಜಕರ ಪರಿಸರದಲ್ಲೇ ಆಯೋಜಿಸಿ ಸಂಸ್ಥೆ ಸಮಾಜ ಸ್ನೇಹಿಯಾಗಿದೆ. ಇಂತಹ ಕಲೆಯನ್ನು ಹಾಗೂ ಸಂಸ್ಥೆಯನ್ನು ನಮ್ಮಂತಹ ಕಲಾಸಕ್ತರು ಪ್ರೋತ್ಸಾಹಿಸಲೇಬೇಕಾದದ್ದು ಪ್ರಜ್ಞಾವಂತ ಕಲಾಭಿಮಾನಿಗಳ ಕರ್ತವ್ಯ.” ಎಂದರು.
ಐರೋಡಿ ಆರ್. ರವಿರಾಜ್ ಮಾತನಾಡಿ “ಮಕ್ಕಳನ್ನು ರಂಗಕ್ಕೆ ಅಣಿಗೊಳಿಸಿ, ರಂಗಸ್ಥಳದಲ್ಲಿ ಮಕ್ಕಳು ಪಡೆಯುವ ಮಾರ್ಗದರ್ಶನ ನಿಜಕ್ಕೂ ಚೇತೋಹಾರಿ. ಇಂತಹ ಮಕ್ಕಳನ್ನು ಸಿದ್ಧಗೊಳಿಸುತ್ತಿರುವ ಗುರುಗಳಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ.” ಎಂದರು.
ದೇಗುಲದ ಪ್ರಧಾನ ಕಾರ್ಯದರ್ಶಿ ಕೃಷ್ಣಮೂತಿ ಹತ್ವಾರ್, ಉದ್ಯಮಿ ಪ್ರದೀಪ ಸೂಡ, ಗುರು ಲಂಬೋದರ ಹೆಗಡೆ, ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು, ಭರತ್ ಚಂದನ್ ಕೋಟೇಶ್ವರ, ರಾಹುಲ್ ಕುಂದರ್ ಕೋಡಿ, ಸಾತ್ಯಕಿ ಪಂಜಿಗಾರು, ಪೂಜಾ ಆಚಾರ್, ಪಂಚಮಿ ವೈದ್ಯ ಉಪಸ್ಥಿತರಿದ್ದರು. ಸಭಾಕಾರ್ಯಕ್ರಮದ ಬಳಿಕ ‘ಯಕ್ಷ ಗಾನ ವೈಭವ’ ರಂಗದಲ್ಲಿ ಪ್ರಸ್ತುತಗೊಂಡಿತು.