ಶೇಣಿ : ರಂಗಚಿನ್ನಾರಿ ಕಾಸರಗೋಡು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರಿನ ಸಹಯೋಗದೊಂದಿಗೆ ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ದಿನಾಂಕ 8 ಆಗಸ್ಟ್ 2024ರಂದು ರಂಗ ಸಂಸ್ಕೃತಿ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ರಂಗಸಂಸ್ಕೃತಿಯ ನಿರ್ದೇಶಕ ಕಾಸರಗೋಡು ಚಿನ್ನಾ “ವಿದ್ಯಾರ್ಥಿಗಳ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಮತ್ತು ಬದುಕಿನ ಕೌಶಲಗಳನ್ನು ಅಭಿವೃಧ್ಧಿ ಪಡಿಸಲು ನಾಟಕವು ಉತ್ತಮ ಹಾದಿಯನ್ನು ನಿರ್ಮಿಸಿ, ತಮ್ಮನ್ನು ತಾವು ಮುಕ್ತವಾಗಿ ಅಭಿವ್ಯಕ್ತ ಪಡಿಸಲು ಸಹಕರಿಸುತ್ತದೆ. ನಾಟಕಕ್ಕೆ ಸಂಬಂಧಿಸಿದ ಚಟುವಟಿಕೆಗಳು ಕಲಾವಿದನಲ್ಲಿ ಭರವಸೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವುದರೊಂದಿಗೆ ಸಂವಹನ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ದೇಹದ ಭಾಷೆ ಮತ್ತು ಭಾವಾಭಿವ್ಯಕ್ತಿಗಳು ನಿರ್ವಹಿಸುವ ನಿರ್ಣಾಯಕ ಪಾತ್ರಗಳ ಬಗ್ಗೆ ತಿಳುವಳಿಕೆಯನ್ನು ನೀಡುತ್ತದೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಂಗಚಿನ್ನಾರಿ ನಿರ್ದೇಶಕ ಸತೀಶ್ಚಂದ್ರ ಭಂಡಾರಿಯವರು ಮಾತನಾಡಿ “ನಾಟಕವು ನಮಗೆ ವಿಶೇಷ ಅಸ್ತಿತ್ವವನ್ನು ನೀಡುತ್ತದೆ. ವ್ಯಕ್ತಿತ್ವದ ವಿಕಾಸಕ್ಕೆ ಕಾರಣವಾಗುತ್ತದೆ. ಇದಕ್ಕೆ ಅವಿಶ್ರಾಂತ ಶ್ರಮದ ಅಗತ್ಯವಿದೆ” ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಯುವ ರಂಗ ನಿರ್ದೇಶಕ ಉದಯ ಸಾರಂಗ್ ಮಾತನಾಡಿ “ಸ್ವಜನಾತ್ಮಕ ವ್ಯಕ್ತಿಯನ್ನಾಗಿ ರೂಪಿಸುವ ಅತಿ ದೊಡ್ಡ ಮಾಧ್ಯಮವೇ ರಂಗಭೂಮಿ. ಚಿಂತಿಸುವಂತೆ ಮಾಡುವುದು ಮಾತ್ರವಲ್ಲದೇ ಹೊಸತನ್ನು ಕಂಡು ಹುಡುಕಲು ಪ್ರೇರೇಪಿಸುವ ಶಕ್ತಿ ರಂಗಭೂಮಿಯಾಗಿದೆ. ಪ್ರಸ್ತುತ ನವ ಮಾಧ್ಯಮ ಅಬ್ಬರದ ಮುಂದೆ ವಿದ್ಯಾರ್ಥಿಗಳನ್ನು ರಂಗಭೂಮಿಗೆ ಆಪ್ತರನ್ನಾಗಿಸುವ ರಂಗ ಸಂಸ್ಕೃತಿ ಕಾಲೇಜು ರಂಗಭೂಮಿ ಪಯಣ ಪ್ರಶಂಸನೀಯ” ಎಂದು ನುಡಿದರು.
ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಪ್ರಿನ್ಸಿಪಾಲ್ ಶಾಸ್ತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಅನುದಾನಿತ ಶಾಲೆಯ ಮ್ಯಾನೇಜರ್ ಶ್ರೀಮತಿ ಶಾರದಾ ವೈ ಮತ್ತು ಎಣ್ಮಕಜೆ ವಾರ್ಡಿನ ಸದಸ್ಯ ರಾಧಾಕೃಷ್ಣ ನಾಯಕ್ ಜೆ.ಎಸ್. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಶಿಕ್ಷಕ ಡಾ. ಸುಭಾಷ್ ಪಟ್ಟಾಜೆ ಸ್ವಾಗತಿಸಿ, ವಿದ್ಯಾರ್ಥಿ ಶತಾ ಆಳ್ವ ವಂದಿಸಿದರು. 54 ಮಂದಿ ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಆಶುರಚನೆ, ಮೂಕಾಭಿನಯ ಮತ್ತು ಸ್ವರಚಿತ ಪ್ರಹಸನದಲ್ಲಿ ಅಭಿನಯಿಸಿ ಮಿಂಚಿದರು.