ಕಾಸರಗೋಡು : ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಕಲಾ-ದೀಕ್ಷಾ (ಗುರು ಶಿಷ್ಯ ಪರಂಪರೆ) ಯೋಜನೆಯನ್ವಯ ಯಕ್ಷಗಾನ ಬೊಂಬೆಯಾಟ ಕಲಿಕಾ ತರಗತಿಯು ದಿನಾಂಕ 17 ಜುಲೈ 2024ರಂದು ಪ್ರಾರಂಭವಾಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಸೋಮಣ್ಣ ಬೇವಿನಮರದ ಇವರು ಮಾತನಾಡಿ “ಕರ್ನಾಟಕದಿಂದ ಹೊರಗುಳಿದಿರುವ ಅಚ್ಚಗನ್ನಡ ಪ್ರದೇಶವಾದ ಗಡಿನಾಡು ಕಾಸರಗೋಡಿನಲ್ಲಿ ಪ್ರಾಚೀನ ಹಾಗೂ ಪರಂಪರಾಗತ ಕಲೆ ಯಕ್ಷಗಾನ ಬೊಂಬೆಯಾಟಕ್ಕೆ ಕಾಯಕಲ್ಪ ನೀಡುತ್ತಿರುವ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಸಾಧನೆ ಸ್ತುತ್ಯರ್ಹ. ನಯನ ಮನೋಹರವಾದ ಚಂದ್ರಗಿರಿಯ ತೀರದಲ್ಲಿ ನೆಲೆ ನಿಂತಿರುವ ಸಂಘದ ಯಕ್ಷಪುತ್ಥಳಿ ಬೊಂಬೆ ಮನೆಗೆ ರಾಷ್ಟ್ರದ ಪ್ರವಾಸೋದ್ಯಮ ನಕಾಶೆಯಲ್ಲಿ ವಿಶೇಷ ಸ್ಥಾನ ಕಲ್ಪಿಸಲು ಕೇಂದ್ರ, ರಾಜ್ಯ ಸರಕಾರಗಳು ಇನ್ನಾದರೂ ಪ್ರಯತ್ನಿಸಬೇಕು” ಎಂದು ಹೇಳಿದರು.
ಪಿಲಿಕುಂಜೆ ಯಕ್ಷಪುತ್ಥಳಿ ಬೊಂಬೆ ಮನೆಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ವಹಿಸಿದ್ದರು. ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ಪ್ರೊಫೆಸರ್ ಎ. ಶ್ರೀನಾಥ್, ಡಾ. ಸದಾನಂದ ಪೆರ್ಲ, ಜಗದೀಶ ಕೂಡ್ಲು, ಮನೋರಮ ಎಡನೀರು ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕ ಹಾಗೂ ಪ್ರಧಾನ ಸೂತ್ರಧಾರಿ ಕೆ.ವಿ. ರಮೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಳಿಕ ಬೊಂಬೆಯಾಟ ಪ್ರದರ್ಶನ ಜರಗಿತು.