ಮಂಜೇಶ್ವರ : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ, ಶಂಪಾ ಪ್ರತಿಷ್ಠಾನ ಬೆಂಗಳೂರು, ವಿಕಾಸ ಮೀಯಪದವು ಇವರ ಸಂಯುಕ್ತಾಶ್ರಯದಲ್ಲಿ ಮೀಯಪದವು ಶ್ರೀ ವಿದ್ಯಾವರ್ಧಕ ಪ್ರೌಢ ಶಾಲೆಯ ನಾರಾಯಣೀಯಂ ರಂಗಮಂದಿರದಲ್ಲಿ ಕಾಸರಗೋಡು ಜಿಲ್ಲೆಯ ವಿವಿಧ ಕನ್ನಡಪರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ‘ಡಾ. ನಾ. ಮೊಗಸಾಲೆ ಪೌರಾಭಿನಂದನೆ ಹಾಗೂ ಸಾಹಿತ್ಯ ಸಮೀಕ್ಷೆ’ ಕಾರ್ಯಕ್ರಮವನ್ನು ದಿನಾಂಕ 10-08-2024ರಂದು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ವಿಠಲ ಶೆಟ್ಟಿ ಬೇಲಾಡಿ ಇವರು ಮಾತನಾಡಿ “ಕಾಸರಗೋಡಿನ ಕೋಳ್ಯೂರಿನಲ್ಲಿ ಜನಿಸಿ ಕುಗ್ರಾಮದಂತಿದ್ದ ಕಾಂತಾವರದಲ್ಲಿ ನೆಲಸಿ, ಕಾಂತಾವರ ಕನ್ನಡ ಸಂಘ, ಅಲ್ಲಮ ಪ್ರಭು ಪೀಠ ಸ್ಥಾಪಿಸಿ, ಆರು ದಶಕಗಳ ಕಾಲ ವೈದ್ಯಕೀಯ, ಸಾಹಿತ್ಯ, ಸಾಂಸ್ಕೃತಿಕ ರಂಗಗಳಲ್ಲಿ ಅಮೋಘ ಸೇವೆ ಸಲ್ಲಿಸಿ ಕಾಂತಾವರದ ಕೀರ್ತಿಯನ್ನು ಕನ್ನಡ ನಾಡಿನಾದ್ಯಂತ ಪಸರಿಸಿದವರು ಡಾ. ನಾ. ಮೊಗಸಾಲೆ. 25 ಕಾದಂಬರಿಗಳು, 15 ಕವನಸಂಕಲನಗಳು, 6 ಕಥಾಸಂಕಲನಗಳು ಸೇರಿದಂತೆ ಐವತ್ತಕ್ಕೂ ಅಧಿಕ ಮಹತ್ವಪೂರ್ಣ ಕೃತಿಗಳನ್ನು ಮೊಗಸಾಲೆಯವರು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಡೆದ ‘ಸಾಹಿತ್ಯ ಸಮೀಕ್ಷೆ’ ಗೋಷ್ಠಿಗಳಲ್ಲಿ ಮೊಗಸಾಲೆಯವರ ಕಾವ್ಯದ ಬಗ್ಗೆ ಸಾಹಿತಿ ಮತ್ತು ವಿಮರ್ಶಕ ಶ್ರೀ ರಮೇಶ್ ಭಟ್ ಬೆಳಗೋಡು, ಕಾದಂಬರಿಗಳ ಬಗ್ಗೆ ವಿಮರ್ಶಕ ಕಾದಂಬರಿಕಾರ ಡಾ. ಬಿ. ಜನಾರ್ದನ ಭಟ್, ಸಣ್ಣ ಕತೆಗಳ ಬಗ್ಗೆ ಸಾಹಿತಿ ಡಾ. ಸುಭಾಷ್ ಪಟ್ಟಾಜೆ ಮಾಹಿತಿ ನೀಡಿದರು. ‘ನೀರು’ ಕಾದಂಬರಿಯ ಬಗ್ಗೆ ಕು. ಸ್ವಾತಿ ಕೆ. ಪೊನ್ನೆತೋಡು, ‘ಭಾರತ ಕಥಾ’ ಕಾದಂಬರಿಯ ಬಗ್ಗೆ ಕು. ಅನನ್ಯ ಬೇಕಲ, ‘ಧರ್ಮಯುದ್ಧ’ ಕಾದಂಬರಿಯ ಬಗ್ಗೆ ಕು. ಪಲ್ಲವಿ ಕೆ. ಮಲ್ಲ ಇವರುಗಳು ಮಾತನಾಡಿದರು. ಶ್ರೀಮತಿ ಸಂಧ್ಯಾ ಗೀತಾ ಬಾಯಾರು ಮತ್ತು ಬಳಗದವರಿಂದ ಮೊಗಸಾಲೆ ಕಾವ್ಯ ಗಾಯನ ಪ್ರಸ್ತುತಗೊಂಡಿತು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಬೆಟ್ಟಂಪಾಡಿ ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಅಭಿನಂದನಾ ಭಾಷಣ ಮಾಡಿದರು. ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ. ರಾಧಾಕೃಷ್ಣ ಬೆಳ್ಳೂರು ಸನ್ಮಾನ ಪತ್ರ ವಾಚಿಸಿದರು.
ವಿಶ್ರಾಂತ ಪ್ರಾಧ್ಯಾಪಕ ಸಾಹಿತಿ ಡಾ. ಹರಿಕೃಷ್ಣ ಭರಣ್ಯ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಉಮೇಶ್ ಯಂ. ಸಾಲಿಯಾನ್, ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯದ ಅಧ್ಯಕ್ಷ ವಾಮನ ರಾವ್ ಬೇಕಲ್, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಶಿವರಾಮ ಕಾಸರಗೋಡು ಶುಭ ಹಾರೈಸಿದರು. ಕಲಾಕುಂಚ ಗಡಿನಾಡು ಘಟಕಾಧ್ಯಕ್ಷೆ ಜಯಲಕ್ಷ್ಮೀ ಕಾರಂತ, ಮೀಯಪದವು ಹಿರಿಯ ಪ್ರಾಥಮಿಕ ಶಾಲೆಯ ಆಡಳಿತ ಸಲಹೆಗಾರ ಶ್ರೀಧರ ರಾವ್ ಆರ್.ಎಂ, ಮುಖ್ಯ ಶಿಕ್ಷಕಿ ಮೃದುಲ, ಪ್ರೇಮಲತಾ ಮೊಗಸಾಲೆ, ಡಾ. ಎಸ್.ಎಲ್. ಮಂಜುನಾಥ್ ಬೆಂಗಳೂರು, ಡಾ. ಶಾರದಾ ಬೆಂಗಳೂರು ಮೊದಲಾದವರು ಉಪಸ್ಥಿತರಿದ್ದರು. ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಡಾ. ನಾ. ಮೊಗಸಾಲೆಯವರು ಹುಟ್ಟೂರಿನಲ್ಲಿ ಲಭಿಸಿದ ಈ ಅಭಿನಂದನೆಗೆ ಅತೀವ ಸಂತಸ ವ್ಯಕ್ತಪಡಿಸಿದರು.
ಶಂಪಾ ಪ್ರತಿಷ್ಠಾನ ಬೆಂಗಳೂರು ಇದರ ಅಧ್ಯಕ್ಷೆ ಡಾ. ಪ್ರಮೀಳ ಮಾಧವ್ ಸ್ವಾಗತಿಸಿ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಪ್ರೊ. ಪಿ.ಎನ್. ಮೂಡಿತ್ತಾಯ ಧನ್ಯವಾದ ಸಮರ್ಪಿಸಿದರು.