ಕಲ್ಲಡ್ಕ : ವಿವೇಕಾನಂದ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯ ಪ್ರಾಯೋಜಿತ ‘ವ್ಯಕ್ತಿತ್ವ ನಿರ್ಮಾಣದಲ್ಲಿ ಸಮಯಪ್ರಜ್ಞೆ’ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವು 14 ಆಗಸ್ಟ್ 2024ರಂದು ಕಲ್ಲಡ್ಕದ ಶ್ರೀರಾಮ ಪದವಿ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಸಂಸ್ಥೆ ಮೈಸೂರು ಇದರ ಮುಖ್ಯಸ್ಥರಾದ  ಸ್ವಾಮಿ ಡಾ. ಮಹಾಮೇಧಾನಂದಜೀ ಮಾತನಾಡಿ “ತ್ಯಾಗ ಮತ್ತು ಸೇವೆ ಇವೆರಡು ಉತ್ತಮ ವ್ಯಕ್ತಿತ್ವದ ಎರಡು ಮುಖಗಳು. ಸತ್ಯ ಪರಿಪಾಲನೆ ಹಾಗೂ ಪರೋಪಕಾರ ಇತ್ಯಾದಿ ಮೌಲ್ಯಗಳ ಅಳವಡಿಕೆಯ ಜೊತೆಗೆ ನಿಸ್ವಾರ್ಥಿಯಾಗಿ ಸಮಯ ನಿರ್ವಹಣೆ ಮಾಡುವುದು ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಹಾದಿ.” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ  ಡಾ. ಪ್ರಭಾಕರ ಭಟ್ ಭಾರತೀಯ ಸಂಸ್ಕೃತಿಯಲ್ಲಿ ವ್ಯಕ್ತಿತ್ವದ ಮಹತ್ವವನ್ನು ಕೆಲವು ದೃಷ್ಟಾಂತಗಳ ಮೂಲಕ ತಿಳಿಸಿದರು.
ವಿವೇಕಾನಂದ ಅಧ್ಯಯನ ಕೇಂದ್ರದ ಸಂಚಾಲಕ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಗಣಿತ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರು ಹೆಗಡೆ, ರಾಮಕೃಷ್ಣ ಸಂಸ್ಥೆಯ ಜೊತೆ ಕೈಜೋಡಿಸಿ ಸ್ವಚ್ಛ ಭಾರತ ಅಭಿಯಾನ ನಡೆಸುತ್ತಿರುವ ಕ್ಯಾ. ಗೋಪಿನಾಥ್ ಬೆಳ್ಳಾಲ, ಹೊಯ್ಸಳ ಪ್ರಾಂತ್ಯದ ಕಾರ್ಯಕಾರಿಣಿ ಸದಸ್ಯೆ ಡಾ. ಕಮಲಾ ಪ್ರಭಾಕರ ಭಟ್ ಹಾಗೂ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಮೇಧಾಸೂಕ್ತ ಪಠಿಸಿದರು. ವಿದ್ಯಾರ್ಥಿಗಳಾದ ಯತೀಶ್ ಆಚಾರ್ಯ ಸ್ವಾಗತಿಸಿ, ಕು. ದಿವ್ಯಾಲಕ್ಷ್ಮೀ ಕಾರ್ಯಕ್ರಮ ನಿರ್ವಹಿಸಿ, ಕು. ಮನ್ವಿತಾ ವಂದಿಸಿದರು.  ಶ್ರೀ ಸ್ವಾಮೀಜಿಯವರು ಶ್ರೀರಾಮ ವಿದ್ಯಾಕೇಂದ್ರದ ವಿವಿಧ ವಿಭಾಗಗಳನ್ನು ವೀಕ್ಷಿಸಿ ಮುಕ್ತ ಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿದರು.
				
		
		
		
	
									 
					