ಉಡುಪಿ : ಹಿರಿಯ ಸಾಂಸ್ಕೃತಿಕ ಸಂಘಟಕ ಸುಧಾಕರ ಆಚಾರ್ಯರ ಕಲಾರಾಧನೆಯ ಸಂಯೋಜನೆಯಲ್ಲಿ ಉಡುಪಿಯ ಹೋಟೆಲ್ ಕಿದಿಯೂರಿನ ಶೇಷಶಯನ ಸಭಾಂಗಣದಲ್ಲಿ ದಿನಾಂಕ 15 ಆಗಸ್ಟ್ 2024ರಂದು 34ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ ಪ್ರಯುಕ್ತ ನಡೆದ ಯಕ್ಷಗಾನ ತಾಳಮದ್ದಳೆ ‘ವೈಕುಂಠ ದರ್ಶನ’ ಮತ್ತು ‘ನಾದ ವೈಕುಂಠ’ ಕಾರ್ಯಕ್ರಮದಲ್ಲಿ ಗಾನ ಚಕ್ರವರ್ತಿ ಎಂ. ದಿನೇಶ ಅಮ್ಮಣ್ಣಾಯ ಭಾಗವತರಿಗೆ ರಜತ ಗೌರವವನ್ನು ಸಮರ್ಪಸಲಾಯಿತು.
ಸುಪ್ರಸಿದ್ದ ಕಲಾವಿದರ ಕೂಡುವಿಕೆಯೊಂದಿಗೆ ಅಮ್ಮಣ್ಣಾಯ ಭಾಗವತರ ಸಾರಥ್ಯದಲ್ಲಿ ಮಾನಿಷಾದ ಪ್ರಸಂಗದ ಆಯ್ದ ಭಾಗವಾಗಿ ‘ವೈಕುಂಠ ದರ್ಶನ’ ತಾಳಮದ್ದಳೆಯ ತರುವಾಯ ನಡೆದ ಅಮ್ಮಣಾಯ ಅಭಿನಂದನಾ ಕಾರ್ಯಕ್ರಮದಲ್ಲಿ ಕಟೀಲು ಕ್ಷೇತ್ರದ ಶ್ರೀನಿವಾಸ ವೆಂಕಟರಮಣ ಆಸ್ರಣ್ಣ, ಡಾ. ಸಾಯಿ ಗಣೇಶ್, ಭವ್ಯಶ್ರೀ ಕಿದಿಯೂರು, ಸುಧಾಕರ ಆಚಾರ್ಯ, ಅಮಿತಾ ಆಚಾರ್ಯ, ಆಚಾರ್ಯ ಯಾಸ್ಕ, ಮೇಧಿನಿ ಆಚಾರ್ಯ, ಡಾ. ಅಭಿನ್ ದೇವದಾಸ್ ಶ್ರೀಯಾನ್, ಸುಧಾ ದಿನೇಶ್ ಅಮ್ಮಣ್ಣಾಯ, ಕನಿಷ್ಕ್ ಕಿಶನ್ ಹೆಗ್ಡೆ, ಸಮೃದ್ಧ್ ಸೂರ್ಯ ಪ್ರಕಾಶ್ ಉಪಸ್ಥಿತರಿದ್ದರು.
ಪ್ರೊ. ಪವನ್ ಕಿರಣಕೆರೆ ನಾದ ನಿರ್ದೇಶನದಲ್ಲಿ ವೃತ್ತಿಪರ ಹಾಗೂ ಹವ್ಯಾಸಿ ವಲಯದ ಆರು ತೆಂಕು, ಆರು ಬಡಗು, ಆರು ಮಹಿಳಾ ಭಾಗವತರ ಜೊತೆಗೆ ಏಳು ಚಂಡೆ-ಮದ್ದಳೆ ವಾದಕರನ್ನು ಸೇರಿಸಿ 25 ಯುವ ಯಾಕ್ಷಾವತಾರಿಗಳ ಸಾಂಗತ್ಯದಲ್ಲಿ ವೈಕುಂಠದ ‘ಭಾಗವತ ಸಮ್ಮೇಳನ’ದ ಕಲ್ಪನೆಯಲ್ಲಿ ‘ನಾದ ವೈಕುಂಠ’ ಯಕ್ಷಗಾನ ವೈಭವ ಕಾರ್ಯಕ್ರಮವು ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿತು. ಪೂರ್ವರಂಗದ ಸ್ತುತಿ ಪದ್ಯಗಳು, ಅಪರೂಪದ ಶೃಂಗಾರ ಪದ್ಯಗಳು ಹಾಗೂ ಸಾಂಘಿಕ ಪ್ರಸ್ತುತಿಯಲ್ಲಿ ಅಷ್ಟಕಗಳ ನಾವಿನ್ಯ ಪ್ರಯೋಗದೊಂದಿಗೆ ಪ್ರಸ್ತುತಗೊಂಡ ‘ನಾದ ವೈಕುಂಠ’ವು ಮಧ್ಯಾಹ್ನ 1ರಿಂದ ರಾತ್ರಿ 10ರವರೆಗೆ ತುಂಬುಗೃಹದ ಪ್ರೇಕ್ಷಕರನ್ನು ಸೆರೆ ಹಿಡಿದಿಟ್ಟುಕೊಳ್ಳುವ ಮೂಲಕ ಯಕ್ಷಲೋಕದಲ್ಲಿ ಐತಿಹಾಸಿಕ ಮೈಲುಗಲ್ಲೆನಿಸಿತು.