ಚನ್ನರಾಯಪಟ್ಟಣ : ಕಲಾವಿದ ಉಮೇಶ್ ತೆಂಕನಹಳ್ಳಿ ಅವರ ಚೊಚ್ಚಲ ಕೃತಿ ‘ಕಪ್ಪು ಹಲ್ಲಿನ ಕಥೆಗಳು’ ಕಾದಂಬರಿ ಲೋಕಾರ್ಪಣೆಯು ದಿನಾಂಕ 12 ಆಗಸ್ಟ್ 2024ರಂದು ಚನ್ನರಾಯಪಟ್ಟಣ ರಾಘವೇಂದ್ರ ಸಾಮಿಲ್ ರಸ್ತೆಯ ರಂಗ ಲೋಕದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಜನಪದ ವಿದ್ವಾಂಸ ಡಾ. ಚಂದ್ರು ಕಾಳೇನಹಳ್ಳಿ “ಸಾಹಿತ್ಯ ರಚನೆ ನಮ್ಮನ್ನು ಸಂಸ್ಕಾರವಂತರನ್ನಾಗಿ ಮಾಡುತ್ತದೆ. ಪುಸ್ತಕ ರಚನೆಯಿಂದ ಹಣ ಸಿಗುತ್ತದೆ ಎಂಬುದು ಸುಳ್ಳು. ಇದು ಎಲ್ಲರ ವಿಷಯದಲ್ಲೂ ಒಂದೇ ರೀತಿ ಇರುವುದಿಲ್ಲ. ನಮ್ಮೊಳಗಿನ ತುಡಿತವನ್ನು ಹೊರಹಾಕಲು ಸಾಹಿತ್ಯ ರಚನೆ ನೆರವಾಗುತ್ತದೆ. ಆದ್ದರಿಂದ ನಮ್ಮ ವಿಕಾಸವೂ ಸಾಧ್ಯ, ಆ ಮೂಲಕ ಯಶಸ್ಸು ಗಳಿಸಬಹುದು. ಯಾವುದೇ ಕೃತಿಯು ಪ್ರತಿ ಬಾರಿ ಓದಿದಾಗಲೂ ಹೊಸದೊಂದು ಅನುಭವ ನೀಡಿದರೆ ಅದು ಸಾರ್ಥಕತೆಯಾದಂತೆ. ಉದಯೋನ್ಮುಖ ಲೇಖಕರಿಗೆ ಹಲವು ಸವಾಲುಗಳಿದ್ದು, ಅವುಗಳನ್ನು ಎದುರಿಸಬೇಕಾಗಿದೆ. ಸಾಹಿತ್ಯದ ಓದನ್ನು ಮರೆತಿರುವ ಜನ ಮೊಬೈಲ್ ನೋಡುವುದಕ್ಕೆ ತಮ್ಮ ಸಮಯ ವಿನಿಯೋಗ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ” ಎಂದು ಹೇಳಿದರು.
ರಂಗಕರ್ಮಿ ಪ್ರಸಾದ್ ರಕ್ಷಿದಿ ಮಾತನಾಡಿ “ಅಧ್ಯಯನ ಮತ್ತು ಅನುಭವದಿಂದ ಸಾಹಿತ್ಯದ ಮಜಲುಗಳನ್ನು ಗುರುತಿಸಬಹುದಾಗಿದ್ದು, ಅಧ್ಯಯನವಿಲ್ಲದಿದ್ದರೆ ಸಾಹಿತ್ಯದ ಸೂಕ್ಷ್ಮತೆ ತಿಳಿಯುವುದಿಲ್ಲ. ಕಲೆಯನ್ನು ಕೇವಲ ಮಾರಾಟದ ಸರಕಾಗಿ ನೋಡಬಾರದು. ನಮ್ಮ ಸಮಾಜ, ಸಾಂಸ್ಕೃತಿಕವಾಗಿ ಹಿಂದೆ ಬೀಳದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದಾಗಬೇಕು” ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಚ್.ಎನ್. ಲೋಕೇಶ್ ಮಾತನಾಡಿ, “ಮನರಂಜನೆ ನಮ್ಮ ಮನಸ್ಸನ್ನು ವಿಕಾಸಗೊಳಿಸುವಂತಿರಬೇಕು” ಎಂದರು. ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿ ಮಾತನಾಡಿ “ದಿನೇ ದಿನೇ ಲೇಖಕರ ಸಂಖ್ಯೆಯು ಕಡಿಮೆಯಾಗುತ್ತಿದೆ ಹಾಗೂ ಲೇಖನ ಓದುವವರ ಸಂಖ್ಯೆಯೂ ಕೂಡ ಕಡಿಮೆಯಾಗುತ್ತಿದೆ. ಆದ್ದರಿಂದ ಸರ್ಕಾರ ಲೇಖನ ಬರೆಯುವವರಿಗೆ ಹೆಚ್ಚಿನ ನೆರವನ್ನು ನೀಡುವಲ್ಲಿ ಸಹಕಾರಿಯಾಗಬೇಕು. ಜೊತೆಗೆ ಲೇಖನ ಬರೆಯುವವರ ಸಂಖ್ಯೆಯನ್ನು ಹೆಚ್ಚು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕು” ಎಂದರು. ಮೈಸೂರು ರಂಗಾಯಣ ರಂಗ ನಿರ್ದೇಶಕ ಆರಸೀಕೆರೆ ಯೋಗಾನಂದ, ಬಿ.ಆರ್. ರವೀಶ್ ಹಾಗೂ ಉಮೇಶ್ ತೆಂಕನಹಳ್ಳಿ ಉಪಸ್ಥಿತರಿದ್ದರು.