ಮಂಗಳೂರು : ‘ಸುರ್ ಸೊಭಾಣ್’ ಮಕ್ಕಳ ಗಾಯನ ತರಬೇತಿಯ ಉದ್ಘಾಟನಾ ಸಮಾರಂಭವು 18 ಆಗಸ್ಟ್ 2024ರಂದು ಮಂಗಳೂರಿನ ಶಕ್ತಿನಗರದಲ್ಲಿರುವ ಕಲಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ‘ಸೋದ್ 4’ ಗಾಯನ ಸ್ಪರ್ಧೆಯ ವಿಜೇತೆ ಜ್ಯಾಕ್ಲಿನ್ ಫೆರ್ನಾಂಡಿಸ್ ಯು. ಎಸ್ ಮಾತನಾಡಿ “‘ಮಾಂಡ್ ಸೊಭಾಣ್’ ಪ್ರತಿಭೆಗಳಿಗೆ ಪ್ರೋತ್ಸಾಹ ಹಾಗೂ ವೇದಿಕೆ ನೀಡುತ್ತದೆ. ನಾನು ಕೂಡಾ ಗಾಯನ ಕ್ಷೇತ್ರದಲ್ಲಿ ಏನಾದರೂ ಹೆಸರು ಮಾಡಿದ್ದರೆ ಅದರಲ್ಲಿ ಈ ಸಂಸ್ಥೆಯ ತರಬೇತಿಯ ಕೊಡುಗೆ ಬಹಳಷ್ಟಿದೆ. ನಾವು ದಿನಂಪ್ರತಿ ಕಲಿಯಬೇಕು. ಲಭ್ಯ ಅವಕಾಶಗಳನ್ನು ಬಳಸಿಕೊಳ್ಳಬೇಕು. ಇಲ್ಲಿಂದ ಚೆನ್ನಾಗಿ ಕಲಿತು ಹೋದರೆ, ಗೆದ್ದು ಬಂದರೆ ಇಡೀ ಪ್ರಪಂಚ ನಿಮ್ಮನ್ನು ಗಮನಿಸುತ್ತದೆ. ‘ಸುರ್ ಸೊಭಾಣ್’ ಕಲಿಕೆಯ ನಂತರ ಸಿಡಿ, ಸಿನೆಮಾ ಹಾಗೂ ವೇದಿಕೆಗಳಲ್ಲಿ ಅವಕಾಶ ದೊರೆಯುವಾಗ ಈ ಅಭ್ಯಾಸದ ಮಹತ್ವ ನಿಮ್ಮರಿವಿಗೆ ಬರುತ್ತದೆ.” ಎಂದರು.
ವಿದ್ಯಾರ್ಥಿಗಳಾದ ಎಲ್ಡನ್ ಪಿರೇರಾ, ಲೆನ್ವಿನ್ ಪಿರೇರಾ, ಪ್ರೇರಣ್ ಕ್ರಾಸ್ತಾ, ಸಿಮೊನಾ ಸಲ್ಡಾನ್ಹಾ, ಸಂಜನಾ ಮತಾಯಸ್, ಆನ್ವಿಯಾ ಲೋಬೊ ಹಾಗೂ ಆಲ್ವಿನಾ ಮೊಂತೇರೊ ಈ ಏಳು ಮಕ್ಕಳಿಗೆ ಸಪ್ತ ಸ್ವರಗಳನ್ನು ಪ್ರತಿನಿಧಿಸುವ ಕುರುಹುಗಳನ್ನು ಶೃಂಗರಿಸಿದ ಬೇಝ್ ಡ್ರಮ್ ನಿಂದ ಹೊರ ತೆಗೆದು ನೀಡಲಾಯಿತು. ನಂತರ 60ಗಂಟೆಗಳ ಕಲಿಕಾ ಪುಸ್ತಕವನ್ನು ತೆಗೆದು ಲೋಕಾರ್ಪಣೆಗೊಳಿಸಿ, ಮುಖ್ಯ ತರಬೇತುದಾರರಾದ ಶಿಲ್ಪಾ ಕುಟಿನ್ಹಾ ಇವರಿಗೆ ಹಸ್ತಾಂತರಿಸಿದರು.
ತರಬೇತಿಗೆ ಶುಭ ಹಾರೈಸಿ ಮಾತನಾಡಿದ ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ “ನೀವು ಬರುವುದು, ಹಾಡುವುದು ಹಾಗೂ ಹೋಗುವುದು ಈ ರೀತಿ ಆಗಬಾರದು. ಈ ವಿಭಾಗದಲ್ಲಿ ಅತ್ಯುತ್ತಮರಾಗಬೇಕು. ಕಲಿಕೆಯನ್ನು ಚೆನ್ನಾಗಿ ಮನನ ಮಾಡಿ ಸದಾ ಅಭ್ಯಾಸ ನಡೆಸಬೇಕು.”ಎಂದರು.
ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ, ಸಹ ತರಬೇತುದಾರ ಡಿಯಲ್ ಡಿ’ಸೋಜ ಹಾಜರಿದ್ದರು. ‘ಸುಮೇಳ್’ ಸಂಯೋಜಕಿ ರೈನಾ ಸಿಕ್ವೇರಾ ಸ್ವಾಗತಿಸಿ, ಸುಮೇಳ್ ಸದಸ್ಯೆ ಪ್ರೀಮಾ ಫೆರಾವೊ ನಿರೂಪಿಸಿ ವಂದಿಸಿದರು. ತರಬೇತಿ ಬಗ್ಗೆ ವಿಕ್ಟರ್ ಮತಾಯಸ್ ಮಾಹಿತಿ ನೀಡಿದರು. ಅರುಣ್ ರಾಜ್ ರೊಡ್ರಿಗಸ್ ಕೆಲ ಆಟಗಳನ್ನು ಆಡಿಸಿದರು. ನಂತರ ಮೊದಲ ದಿನದ ತರಬೇತಿ ನಡೆಯಿತು.