ಗ್ರಾಮೀಣ ಪ್ರತಿಭೆಯಾಗಿ ಉತ್ತಮ ಹೆಸರು ಗಳಿಸಿರುವ ಅಂತರರಾಷ್ಟ್ರೀಯ ನೃತ್ಯಪಟು-ಗುರು ವಿದ್ವಾನ್ ಕೋಲಾರ ರಮೇಶ್, ದೇಶ-ವಿದೇಶಗಳ ಪ್ರತಿಷ್ಟಿತ ವೇದಿಕೆಗಳಲ್ಲಿ, ಅಸಂಖ್ಯಾತ ನೃತ್ಯಪ್ರದರ್ಶನಗಳನ್ನು ಮತ್ತು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಮ್ಮುಖ ಶಿಷ್ಯರ ನೃತ್ಯಪ್ರದರ್ಶನ ಪ್ರಸ್ತುತಪಡಿಸಿ ಪ್ರಶಂಸೆ ಪಡೆದವರು ಎಂಬುದು ವಿಶೇಷ ಸಂಗತಿ.
ಹೊಸಕೋಟೆಯಲ್ಲಿ ನೃತ್ಯಶಾಲೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ರಮೇಶ ಅವರ ಸಮರ್ಥ ಮಾರ್ಗದರ್ಶನದಲ್ಲಿ ತಯಾರಾದ ನೃತ್ಯಕುಸುಮಗಳು ಅಸಂಖ್ಯಾತ ಮತ್ತು ನೃತ್ಯನೈಪುಣ್ಯ ಪಡೆದು ರಂಗಪ್ರವೇಶ ಮಾಡಿದ ಪ್ರತಿಭೆಗಳು ಅನೇಕಾನೇಕ. ಇದು ಇವರ ನೇತೃತ್ವದ ‘ಶ್ರೀ ನವಚೇತನ ನೃತ್ಯಕಲಾ ಅಕಾಡೆಮಿ’ಯ 48 ನೇ ರಂಗಪ್ರವೇಶವಾಗಿದೆ. ಇವರ ನುರಿತ ಗರಡಿಯಲ್ಲಿ ರೂಹುತಳೆದ ನೃತ್ಯಶಿಲ್ಪ ಕು. ಖುಷಿ ದೇವರಾಜ್ ಶ್ರೀಮತಿ ಸುಜಾತ ಮತ್ತು ದೇವರಾಜ್ ಅವರ ಪುತ್ರಿಯಾಗಿದ್ದು, ಈಗಾಗಲೇ ದೆಹಲಿಯೂ ಸೇರಿದಂತೆ ನಾಡಿನಾದ್ಯಂತ ನೃತ್ಯಪ್ರದರ್ಶನಗಳನ್ನು ನೀಡಿದ್ದಾರೆ. ಈ ಭರವಸೆಯ ಪ್ರತಿಭೆ- ತನ್ನ ನೃತ್ಯದ ವಿವಿಧ ಆಯಾಮಗಳನ್ನು ಪ್ರದರ್ಶಿಸಲು ಆಗಸ್ಟ್ 23 ಶುಕ್ರವಾರ ಮಧ್ಯಾಹ್ನ 2-00 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ವಿಧ್ಯುಕ್ತವಾಗಿ ತನ್ನ ‘ರಂಗಪ್ರವೇಶ’ ನೆರವೇರಿಸಿಕೊಳ್ಳಲಿದ್ದಾರೆ. ಈಕೆಯ ನೃತ್ಯ ಕಲಾಸೊಬಗನ್ನು ಕಣ್ತುಂಬಿಕೊಳ್ಳಲು ಸರ್ವರಿಗೂ ಆದರದ ಸ್ವಾಗತ.
ನೃತ್ಯ ಎಂಬುದು ಕು. ಖುಷಿಗೆ ಬಾಲ್ಯದ ಒಲವು. ಪುಟ್ಟಹುಡುಗಿಯಾಗಿದ್ದಾಗಲೇ ನೃತ್ಯ ಕಲಿಯಲಾರಂಭಿಸಿದಳು. ಈ ಹದಿನೆಂಟರ ಬಾಲೆ ಕಳೆದ 5 ವರ್ಷಗಳಿಂದ ವಿ. ರಮೇಶ್ ಅವರಲ್ಲಿ ಬಹು ಆಸಕ್ತಿ- ಬದ್ಧತೆಗಳಿಂದ ಕಲಿಯುತ್ತ ‘ಮಾರ್ಗಂ’ ಸಂಪ್ರದಾಯದ ಎಲ್ಲ ಕೃತಿಗಳನ್ನೂ ಚೆನ್ನಾಗಿ ಅಭ್ಯಾಸ ಮಾಡಿದ್ದಾಳೆ. ಕರ್ನಾಟಕ ಸರ್ಕಾರ ನಡೆಸುವ ಜ್ಯೂನಿಯರ್ ನೃತ್ಯಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದ ಅಗ್ಗಳಿಕೆ ಇವಳದು. ಓದಿನಲ್ಲೂ ಬುದ್ಧಿವಂತೆ. ಹೊಸಕೋಟೆಯ ಮಹದೇವ ಕಾಲೇಜಿನಿಂದ 12 ನೇ ತರಗತಿಯಲ್ಲಿ ಉತ್ತಮಾಂಕಗಳಿಂದ ತೇರ್ಗಡೆಯಾಗಿ ಇದೀಗ ‘ಆಕಾಶ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್’ ದೇವನಹಳ್ಳಿಯಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ಅಭ್ಯಾಸ ಮಾಡುತ್ತಿರುವ ಖುಷಿಗೆ ನೃತ್ಯದ ಬಗ್ಗೆ ಪ್ರೀತಿ ಅಪಾರ.
ಈ ಗ್ರಾಮೀಣ ನೃತ್ಯಪ್ರತಿಭೆ ಹಳ್ಳಿಯಿಂದ ದಿಲ್ಲಿಯವರೆಗೆ ನೂರಾರು ನೃತ್ಯ ಕಾರ್ಯಕ್ರಮಗಳನ್ನು ನೀಡಿ ಕಲಾರಸಿಕರ ಮೆಚ್ಚುಗೆ ಗಳಿಸಿರುವುದೇ ವೈಶಿಷ್ಟ್ಯ. ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವದಲ್ಲಿ ಇವಳು ನೀಡಿರುವ ನೃತ್ಯ ಪ್ರದರ್ಶನ ಚಿರಸ್ಮರಣೀಯ. ಉತ್ತಮ ಇಂಜಿನಿಯರಾಗಿ ನಾಡಿಗೆ ಸೇವೆ ಸಲ್ಲಿಸುವ ಆಶಯದೊಂದಿಗೆ ಖುಷಿಗೆ ನೃತ್ಯರಂಗದಲ್ಲಿ ಅಪಾರ ಸಾಧನೆಗೈವ ಆಕಾಂಕ್ಷೆಯೂ ಇದೆ.
ವೈ.ಕೆ.ಸಂಧ್ಯಾ ಶರ್ಮ.
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.