ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಇವುಗಳ ಸಹಯೋಗದಲ್ಲಿ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮವು 17 ಆಗಸ್ಟ್2024ರಂದು ಕರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ ವೇದಾಂತ ಹಾಗೂ ಯೋಗ ಪ್ರವೀಣರಾದ ಡಾ. ಶಶಾಂಕ ಹತ್ವಾರ್ ‘ಮುಂಡಕ ಉಪನಿಷತ್ತು’ ಇದರ ಕುರಿತು ಮಾತನಾಡಿ “ವೇದಜ್ಞಾನದ ಮೂಲ ಸಂಸ್ಕಾರವು ತಂದೆಯಿಂದ ಮಕ್ಕಳಿಗೆ ನಂತರ ಹೆಚ್ಚಿನ ಜ್ಞಾನವು ಗುರುಗಳಿಂದ ಶಿಷ್ಯರಿಗೆ ಪಾರಂಪರಿಕವಾಗಿ ದೊರೆಯುವ ವಿದ್ಯೆಯಾಗಿದೆ. ಮುಂಡಕವು ಜ್ಞಾನಕ್ಕೆ ಸಂಬಂಧಿಸಿದ ಉಪನಿಷತ್ತು ಆಗಿದ್ದು ಇದನ್ನು ಸಂಹಿತಾ ಉಪನಿಷತ್ತು ಎಂಬುದಾಗಿಯೂ ಕರೆಯಲಾಗುತ್ತಿದೆ. ಯಾವುದನ್ನು ತಿಳಿದುಕೊಂಡಾಗ ಎಲ್ಲವನ್ನೂ ತಿಳಿದುಕೊಂಡಂತಾಗುವುದೋ ಅದನ್ನೇ ಪರಾ ವಿದ್ಯೆ, ಬ್ರಹ್ಮಜ್ಞಾನ, ಮೋಕ್ಷ ಎನ್ನಲಾಗುತ್ತದೆ. ನಮ್ಮೊಳಗೆ ಪ್ರತಿಯೊಬ್ಬರಲ್ಲಿಯೂ ಭಗವಂತನ ವಿಶೇಷ ಚೇತನವಿದ್ದು ಸಾಧನೆಯಿಂದ ಆ ಚೈತನ್ಯ ಸ್ವರೂಪದ ಅರಿವಾಗುತ್ತದೆ. ಲೌಕಿಕದಲ್ಲಿದ್ದುಕೊಂಡೇ ಈ ಬ್ರಹ್ಮ ಜ್ಞಾನವನ್ನು ಹೊಂದಬಹುದಾಗಿದೆ. ವೇದಾಂತವು ಸ್ವಂತ ಅಧ್ಯಯನದಿಂದ ಕಲಿಯುವ ವಿದ್ಯೆಯಾಗಿದೆ. ಇದು ಒಬ್ಬರಿಗೆ ಅಥವಾ ಒಂದು ಪಂಗಡಕ್ಕೆ ಸೀಮಿತವೂ ಆಗಿರದೆ ಯೋಗ್ಯತೆ ಇರುವ ಎಲ್ಲರೂ ವೇದೋಪನಿಷತ್ತುಗಳನ್ನು ಕಲಿಯಬಹುದಾಗಿದೆ.“ ಎಂದರು.
ಡಾ. ನಾ. ಮೊಗಸಾಲೆ, ನಿತ್ಯಾನಂದ ಪೈ, ಏರ್ವೈಸ್ ಮಾರ್ಷಲ್ ಶ್ರೀ ರಮೇಶ್ ಕಾರ್ಣಿಕ್, ಶ್ರೀಮತಿ ಮಿತ್ರಪ್ರಭಾ ಹೆಗ್ಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಾನಂದ ನಾರಾವಿ ಸ್ವಾಗತಿಸಿ, ಕು. ಶಾರ್ವರಿ ಪ್ರಾರ್ಥಿಸಿ, ಡಾ. ಸುಮತಿ ಪಿ. ಕಾರ್ಯಕ್ರಮ ನಿರೂಪಿಸಿ, ಶ್ರೀ ಸುಧಾಕರ್ ಶ್ಯಾನುಭೋಗ್ ಅತಿಥಿಗಳನ್ನು ಪರಿಚಯಿಸಿ, ಶ್ರೀಮತಿ ಸುಲೋಚನಾ ಬಿ. ವಿ. ವಂದಿಸಿದರು.