ಮಂಗಳೂರು : ಅಖಿಲ ಭಾರತ ತುಳು ಒಕ್ಕೂಟ (ರಿ.) ಇದರ ವತಿಯಿಂದ ‘ತುಳು ಜಾನಪದ ಉಚ್ಚಯ 2024’ ಕಾರ್ಯಕ್ರಮವನ್ನು ದಿನಾಂಕ 24 ಆಗಸ್ಟ್ 2024ರಂದು ಬೆಳಗ್ಗೆ ಗಂಟೆ 9-30ಕ್ಕೆ ಮಂಗಳೂರಿನ ಪುರಭವನದಲ್ಲಿ ಆಯೋಜಿಸಲಾಗಿದೆ.
ಬೆಳಗ್ಗೆ 8.30ಕ್ಕೆ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನಿಂದ ಪುರಭವನದವರೆಗೆ ನಡೆಯುವ ತುಳುವೆರೆ ದಿಬ್ಬಣ ಮೆರವಣಿಗೆಯನ್ನು ಶಾಸಕ ಡಿ. ವೇದವ್ಯಾಸ ಕಾಮತ್ ಇವರು ಉದ್ಘಾಟಿಸಲಿದ್ದಾರೆ. ದಿವಾಕರ ಶೆಟ್ಟಿ ಸಾಂಗ್ಲಿ, ನಗ್ರಿಗುತ್ತು ರೋಹಿತ್ ಶೆಟ್ಟಿ ಕರ್ನೂರು ಮೋಹನ್ ರೈ, ಅಶೋಕ್ ಪಕ್ಕಳ ಮುಂಬಯಿ ಭಾಗವಹಿಸಲಿದ್ದಾರೆ. ಕಂಬಳ ಕೂಟಕ್ಕೆ ಹೆಸರುವಾಸಿಯಾದ ನಂದಳಿಕೆ ಶ್ರೀಕಾಂತ ಭಟ್ ಅವರ ಗಿಡ್ಡೆರು ‘ನಂದಳಿಕೆ ಪಾಂಡು’ವಿಗೆ ಸನ್ಮಾನ ನಡೆಯಲಿದೆ.
ಬೆಳಗ್ಗೆ 9-30ಕ್ಕೆ ನಡೆಯಲಿರುವ ನಮ್ಮ ತುಳುನಾಡ ಕಲಾ ಪಂಥವನ್ನು ಡಾ. ಎ. ಸದಾನಂದ ಶೆಟ್ಟಿ ಉದ್ಘಾಟಿಸಲಿದ್ದಾರೆ. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಪ್ರೊ. ಪಿ.ಎಲ್. ಧರ್ಮ, ಬಿ. ರಮಾನಾಥ ರೈ, ಐವನ್ ಡಿಸೋಜ, ರಾಜೇಶ್ ಖನ್ನಾ, ಜಾನಕಿ ಬ್ರಹ್ಮಾವರ್ ಉಪಸ್ಥಿತರಿರಲಿದ್ದಾರೆ. ನಾನಾ ಅಕಾಡೆಮಿಗಳ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್, ತಲ್ಲೂರು ಶಿವರಾಮ್ ಶೆಟ್ಟಿ, ಜೋಕಿಂ ಸ್ಪ್ಯಾನಿ ಅಲ್ವಾರಿಸ್, ಉಮರ್ ಯು.ಎಚ್., ಸದಾನಂದ ಮಾವಜಿ, ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಭಾಗವಹಿಸಲಿದ್ದಾರೆ.
ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಸಚಿವ ಶಿವರಾಜ್ ಎಸ್. ತಂಗಡಗಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಭಾಗವಹಿಸಲಿದ್ದು, ಹಿರಿಯ ನಾಟಕಕಾರ ತೋನ್ಸೆ ವಿಜಯಕುಮಾರ್ ಶೆಟ್ಟಿ ಮುಂಬಯಿ ಅವರಿಗೆ ‘ಪೆರ್ಮೆದ ತುಳುವೆ- 2024’ ಪ್ರಶಸ್ತಿಯನ್ನು ಡಾ. ಎಂ. ಮೋಹನ್ ಆಳ್ವ ಪ್ರದಾನ ಮಾಡಲಿದ್ದಾರೆ. ಶಶಿಧರ ಶೆಟ್ಟಿ ಬರೋಡ ಅಧ್ಯಕ್ಷತೆ ವಹಿಸಲಿದ್ದಾರೆ.
ಕರ್ನಾಟಕ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಡಾ. ಭರತ್ ಶೆಟ್ಟಿ ವೈ., ಅಶೋಕ್ ಕುಮಾರ್ ರೈ, ಉಮಾನಾಥ ಕೋಟ್ಯಾನ್, ಡಾ. ಮಂಜುನಾಥ ಭಂಡಾರಿ, ಉದ್ಯಮಿ ಡಾ. ಮೂಡಂಬೈಲು ರವಿ ಶೆಟ್ಟಿ ಕತಾರ್ ಮತ್ತಿತರರು ಭಾಗವಹಿಸಲಿದ್ದಾರೆ. ರಾತ್ರಿ 7-00ರಿಂದ ಅಕಾಡೆಮಿಗಳ ಪ್ರಾಯೋಜಿತ ಕಲಾ ಪ್ರದರ್ಶನ ನಡೆಯಲಿದೆ.
ನಮ್ಮ ತುಳುನಾಡ ಕಲಾಪಂಥದಲ್ಲಿ 20 ನಿಮಿಷದ ಅವಧಿಯಲ್ಲಿ ತುಳು ಭಾಷೆ, ಸಂಸ್ಕೃತಿ, ಚರಿತ್ರೆ, ಹಾಡು, ನೃತ್ಯ, ವೇಷ ಭೂಷಣ ಸ್ಪರ್ಧೆ ನಡೆಯಲಿದ್ದು, ವಿವಿಧ ತುಳು ಸೇವಾ ಸಂಘಟನೆಗಳು ಭಾಗವಹಿಸಲಿವೆ. ಪ್ರಥಮ ನಗದು ಬಹುಮಾನ ರೂ.50,000/- ದ್ವಿತೀಯ ಬಹುಮಾನ ರೂ.30,000/- ತೃತೀಯ ಬಹುಮಾನ ರೂ.20,000/- ಮತ್ತು ಭಾಗವಹಿಸಿದ ಎಲ್ಲಾ ತಂಡಗಳಿಗೆ ಗೌರವ ಧನ ರೂಪಾಯಿ ಐದು ಸಾವಿರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು.