ಮಂಗಳೂರು : ನಾಟ್ಯಾರಾಧನಾ ಕಲಾ ಕೇಂದ್ರದ ತ್ರಿಂಶೋತ್ಸವದ ಅಂಗವಾಗಿ ನಡೆಯುತ್ತಿರುವ ಸರಣಿ ಕಾರ್ಯಕ್ರಮ ನೃತ್ಯಾಮೃತ -8 ‘ಪದ್ಮ ಪಲ್ಲವ’ ವೈವಿಧ್ಯಮಯ ಭರತನಾಟ್ಯ ಕಾರ್ಯಕ್ರಮವು ದಿನಾಂಕ 18 ಆಗಸ್ಟ್ 2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಸಭಾಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಇವರು ಉದ್ಘಾಟಿಸಿ “ಭರತನಾಟ್ಯದಂತಹ ಶಾಸ್ತ್ರೀಯ ಕಲೆಗಳು ಉಳಿಯಬೇಕು ಮತ್ತು ಗುರುಪರಂಪರೆಯಲ್ಲಿ ಮುಂದುವರಿಯಬೇಕು. ಶಾಸ್ತ್ರೀಯ ಕಲೆಗಳು ಭಾರತೀಯ ಸಂಸ್ಕೃತಿಯ ಬೇರು. ಮುಂದಿನ ಜನಾಂಗಕ್ಕೆ ಭಾರತೀಯತೆಯ ವೈಶಿಷ್ಯಪೂರ್ಣ ವಿಚಾರಧಾರೆ ತಿಳಿಸುವಲ್ಲಿ ನಾಟ್ಯಾರಾಧನಾ ಕಲಾ ಕೇಂದ್ರದ ಮೂಲಕ ವಿದುಷಿ ಸುಮಂಗಲಾ ರತ್ನಾಕರ್ ರಾವ್ ಇವರ ಸಾಧನೆ ಶ್ಲಾಘನೀಯ ಎಂದು ನುಡಿದರು.
ಈ ಸಂದರ್ಭದಲ್ಲಿ ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಶ್ರೀ ಶೇಖರ್ ಡಿ. ಶೆಟ್ಟಿಗಾರ್ ದುಬೈ ಇವರು ಯು.ಎ.ಇ.ಯಲ್ಲಿ ನಡೆಸುತ್ತಿರುವ ಶಿಸ್ತುಬದ್ಧ ಚೌಕಟ್ಟಿನಿಂದ ಕೂಡಿದ ತೆಂಕುತಿಟ್ಟು ಯಕ್ಷಗಾನದ ದಕ್ಷ ಗುರುತ್ವಕ್ಕೆ “ಯಕ್ಷಾಭಿವಂದನಾ ಪುರಸ್ಕಾರ” ನೀಡಿ ಅಭಿನಂದಿಸಲಾಯಿತು.
ಸಮಾರಂಭದಲ್ಲಿ ಧರ್ಮಸ್ಥಳದ ಮಾಜಿ ಜಮಾ ಉಗ್ರಾಣ ಅಧಿಕಾರಿಗಳಾದ ಶ್ರೀ ಭುಜಬಲಿ ಧರ್ಮಸ್ಥಳ, ದುಬೈ ಬ್ರಾಹ್ಮಣ ಸಂಘದ ಕಾರ್ಯದರ್ಶಿ ಶ್ರೀ ಕೃಷ್ಣ ಪ್ರಸಾದ್ ರಾವ್, ಹೊಸಬೆಟ್ಟಿನ ಶಾರದಾ ನಾಟ್ಯಾಲಯದ ವಿದುಷಿ ಭಾರತಿ ಸುರೇಶ್, ಬಜ್ಪೆ ಪೋಷ್ಟ್ ಆಪೀಸಿನ ಎಲ್.ಎಸ್.ಜಿ. ಪಿ.ಎ. ಶ್ರೀಮತಿ ಶಶಿಕಲಾ ನಿತ್ಯಾನಂದ ಶೆಟ್ಟಿಗಾರ್, ನಾಟ್ಯಾರಾಧನಾ ಕಲಾ ಕೇಂದ್ರದ ಹಿರಿಯ ವಿದ್ಯಾರ್ಥಿನಿ ತಂತ್ರಜ್ಞೆ ವಿದುಷಿ ಶ್ರೇಯಾ ಎಸ್. ಶೆಟ್ಟಿ ಹಾಗೂ ನಾಟ್ಯಾರಾಧನಾ ಕಲಾ ಕೇಂದ್ರದ ಟ್ರಷ್ಟಿ ಶ್ರೀ ಬಿ. ರತ್ನಾಕರ ರಾವ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಉದ್ಘಾಟನೆಯ ಬಳಿಕ ಗುರು ವಿದುಷಿ ಸುಮಂಗಲಾ ರತ್ನಾಕರ್ ನಿರ್ದೇಶನ ಮತ್ತು ನಟುವಾಂಗದೊಂದಿಗೆ ನಾಟ್ಯಾರಾಧನಾ ಕಲಾ ಕೇಂದ್ರದ ಹಿರಿಯ ವಿಭಾಗದ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಭರತನಾಟ್ಯ ಕಾರ್ಯಕ್ರಮ ಜರುಗಿತು. ಹಿಮ್ಮೇಳದಲ್ಲಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ, ವಿದ್ವಾನ್ ಸುರೇಶ್ ಬಾಬು ಕಣ್ಣೂರು, ವಿದ್ವಾನ್ ರಾಜಗೋಪಾಲ್ ಕಾಂಞಂಗಾಡ್ ಸಹಕರಿಸಿದ್ದರು.
ತ್ರಿಂಶೋತ್ಸವ ಸಮಿತಿಯ ಅಧ್ಯಕ್ಷರಾದ ಡಾ. ಗಣೇಶ್ ಅಮೀನ್ ಸಂಕಮಾರ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ, ವಿದುಷಿ ಅನು ಧೀರಜ್ ಅಭಿನಂದನಾ ಪತ್ರ ವಾಚಿಸಿದರು. ಸಂಸ್ಥೆಯ ಪುಟಾಣಿಗಳು ಪ್ರಾರ್ಥಿಸಿದರು. ವಿದುಷಿ ಸುಮಂಗಲಾ ರತ್ನಾಕರ್ ರಾವ್ ವಂದಿಸಿ, ವಿದುಷಿ ಭವ ಅಮೀನ್ ಸಂಕಮಾರ್ ಕಾರ್ಯಕ್ರಮ ನಿರೂಪಿಸಿದರು.