ಮಂಡ್ಯ : ರಂಗ ಬಂಡಿ ಮಳವಳ್ಳಿ ಹಮ್ಮಿಕೊಂಡ ಮಳವಳ್ಳಿ ಸುಂದರಮ್ಮ ಸ್ಮರಣಾರ್ಥ ರಂಗೋತ್ಸವದ ಉದ್ಘಾಟನಾ ಸಮಾರಂಭವು 21 ಆಗಸ್ಟ್ 2024ರಂದು ಮಳವಳ್ಳಿಯ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ರಂಗ ಸನ್ಮಾನ ಸ್ವೀಕರಿಸಿದ ರಂಗಭೂಮಿ ಹಾಗೂ ಚಲನಚಿತ್ರ ರಂಗದ ಹಿರಿಯ ನಟಿ ಉಮಾಶ್ರೀ ಮಾತನಾಡಿ “ಪೌರಾಣಿಕ ನಾಟಕಗಳಲ್ಲಿ ಸ್ತ್ರೀ ಪಾತ್ರಗಳನ್ನು ಪುರುಷರೇ ನಿರ್ವಹಿಸುತ್ತಿದ್ದ ಕಾಲಘಟ್ಟದಲ್ಲಿ ಚಂದನವನಕ್ಕೆ ಮೊಟ್ಟಮೊದಲ ಬಾರಿಗೆ ಕಾಲಿಟ್ಟ ಮಳವಳ್ಳಿ ಸುಂದ್ರಮ್ಮ ರಂಗಭೂಮಿ ಕಲೆಯಲ್ಲಿ ಹೊಸ ಇತಿಹಾಸಕ್ಕೆ ನಾಂದಿಯಾಡಿದ ಕಲಾವಿದೆಯಾಗಿದ್ದರು. 1905ರಲ್ಲಿ ಮಳವಳ್ಳಿಯಲ್ಲಿ ಜನಿಸಿದ ಸುಂದ್ರಮ್ಮ ತಮ್ಮ ಪ್ರತಿಭೆಯ ಮೂಲಕ ನಾಟಕ ರಂಗ ಪ್ರವೇಶ ಮಾಡಿದರು. ಉತ್ತರ ಕರ್ನಾಟಕದಲ್ಲಿ ಪ್ರಥಮ ಮಹಿಳಾ ನಾಟಕ ಕಂಪನಿಯನ್ನು ಪ್ರಾರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ನಾಟಕ ರಂಗದ ಸಾಧನೆಗೆ “ನಾಟ್ಯ ಶಾರದೆ” ಎಂಬ ಬಿರುದು ನೀಡಿ ಸನ್ಮಾನಿಸಲಾಗಿತ್ತು. ಜೊತೆಗೆ ಹಲವು ಕನ್ನಡ ಚಲನಚಿತ್ರಗಳಲ್ಲಿಯೂ ತಮ್ಮಅಭಿನಯದ ಮೂಲಕ ಗಮನಸೆಳೆದಿದ್ದಾರೆ. ಜಾನಪದ, ರಂಗಭೂಮಿ ಕಲೆ ಹಾಗೂ ಕಲಾವಿದರನ್ನು ಉಳಿಸುವ ಹಾಗೂ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಳವಳ್ಳಿ ತಾಲೂಕು ಮಂಟೇಸ್ವಾಮಿ ಸಿದ್ದಪ್ಪಾಜಿ, ಹಾಗೂ ಮಹದೇಶ್ವರ ನಾಡಾಗಿದ್ದು ಅವರ ಅನುಯಾಯಿಗಳು ಬಹಳ ಮಂದಿ ಜಾನಪದ ಕಲೆಯನ್ನು ಮೈಗೂಡಿಸಿಕೊಂಡು ಶ್ರೇಷ್ಠ ಕಲಾವಿದರಾಗಿದ್ದಾರೆ.” ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ರಾಮಮನೋಹರ ಲೋಹಿಯಾ ವಿಚಾರ ವೇದಿಕೆಯ ಅಧ್ಯಕ್ಷರಾದ ದಡದಪುರ ಶಿವಣ್ಣ ಮಾತನಾಡಿ “ಆಧುನಿಕ ಯುಗದ ಭರಾಟೆಯಲ್ಲಿರುವ ಯುವ ಸಮೂಹ ಸಾಮಾಜಿಕ ಜಾಲತಾಣದಲ್ಲಿ ಮೈಮರೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮಾನವೀಯ ಮೌಲ್ಯ, ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಕಲಿಸುವ ಜಾನಪದ ಕಲೆ ಹಾಗೂ ರಂಗಭೂಮಿ ಇನ್ನೂ ಹೆಚ್ಚಾಗಿ ಪ್ರದರ್ಶನಗೊಳ್ಳಬೇಕು. ರಂಗಭೂಮಿ ಕಲೆಯಲ್ಲಿ ಅಂದಿನ ಕಾಲದಲ್ಲಿಯೇ ಅಪಾರವಾದ ಸಾಧನೆ ಮಾಡಿದ ಮಳವಳ್ಳಿ ಸುಂದ್ರಮ ಅವರ ಹೆಸರಿನಲ್ಲಿ ರಂಗಭೂಮಿ, ಚಲನಚಿತ್ರ ಹಾಗೂ ರಾಜಕೀಯದಲ್ಲಿ ಅಪಾರ ಸಾಧನೆ ಮಾಡಿದ ಉಮಾಶ್ರಿ ಅವರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದೆ.” ಎಂದರು.
ರಂಗ ಕರ್ಮಿಗಳಾದ ಶ್ರೀನಿವಾಸ ಜಿ. ಕಪ್ಪಣ್ಣ, ಲೋಕೇಶ್, ಮಳವಳ್ಳಿ ಸುಂದರಮ್ಮ ಕುಟುಂಬಸ್ಥರು, ರಂಗ ಬಂಡಿಯ ಸಂಚಾಲಕರಾದ ಮಧು ಮಳವಳ್ಳಿ ಹಾಗೂ ಸಂಘಟಕರಾದ ಎನ್. ಎಲ್. ಭರತ್ ರಾಜ್ ಉಪಸ್ಥಿತರಿದ್ದರು.
ವೈ. ಎಸ್. ಪುಟ್ಟಣ್ಣಯ್ಯ ಮತ್ತು ತಂಡದವರಿಂದ ಸುಂದರಮ್ಮ ಅಭಿನಯದ ರಂಗ ಗೀತೆ ಹಾಗೂ ಉಮಾಶ್ರೀ ಮಧು ಅಭಿನಯದ ಏಕ ವ್ಯಕ್ತಿ ನಾಟಕ ‘ಅನುರಕ್ತೆ’ ರಂಗದಲ್ಲಿ ಪ್ರದರ್ಶನಗೊಂಡಿತು.