ಉಡುಪಿ : ರಂಜನಿ ಮೆಮೋರಿಯಲ್ ಟ್ರಸ್ಟ್ ಉಡುಪಿ ಇದರ ವತಿಯಿಂದ ವಾರ್ಷಿಕ ಸಂಗೀತ ಕಾರ್ಯಕ್ರಮಗಳ ಉದ್ಘಾಟನೆಯ ಅಂಗವಾಗಿ ದಿನಾಂಕ 3 ಆಗಸ್ಟ್ 2024ರಂದು ಚೆನ್ನೈಯ ಸಿದ್ದಾರ್ಥ ಪ್ರಕಾಶ್ ಇವರ ತಂಡದವರಿಂದ ಸಂಗೀತ ಕಛೇರಿಯು ಉಡುಪಿಯ ಲತಾಂಗಿ ಹಾಲ್‌ನಲ್ಲಿ ನಡೆಯಿತು.
ಸಿದ್ದಾರ್ಥ ಪ್ರಕಾಶ್ ಮತ್ತು ತಂಡ ಪ್ರಸ್ತುತ ಪಡಿಸಿದ ಅನುಸರಣಿ -ಜಗನ್ನೋಹಿನಿಯ ಶೋಭಿಲ್ಲು ಕನ್ನಡಗೌಳದ ಓರಜೂಪು, ಹಮೀರ್‌ಕಲ್ಯಾಣಿಯ ವೆಂಕಟಶೈಲ, ಆನಂದ ಭೈರವಿಯ ಮರಿವೇರೆ, ಪೂರ್ಣಚಂದ್ರಿಕದ ತೆಲಿಸಿರಾಮ, ಕೀರವಾಣಿಯ ಕಲಿಗೆಯುಂಟೆ, ರಾಗಮಾಲಿಕೆಯ ಬಳಿಕ ರಾಮ ಮಂತ್ರವ. ಸಿದ್ದಾರ್ಥರಿಗೆ ಟಿ.ಎನ್.ಎಸ್. ಮತ್ತು ನೈವೇಲಿ ಗುರುಪರಂಪರೆಯನ್ನು ನೆನಪಿಸುವ, ಅನಾಯಾಸವಾಗಿ ಓಡಿಯಾಡುವ ಆಕಾರಗಳಿವೆ. ಸಂಪ್ರದಾಯಬದ್ಧ ಶೈಲಿಯ ಇವರ ಹಾಡುಗಾರಿಕೆಯು ಸ್ವರ ಸಂಯೋಜನೆಗಳ ಸ್ವರ ಗುಚ್ಛಗಳ ಹೆಣಿಗೆಯಾಗಿರುತ್ತದೆ. ಇವರು ವಾಯ್ಸ್ ಕಲ್ಟರ್‌ನೊಂದಿಗೆ, ಘನ ನಯ ಕ್ರಮ ಅನುಸರಿಸಿ ಕಾರ್ವೆ ಸಹಿತವಾಗಿ ಸ್ವರಗಳನ್ನು ಪ್ರಯೋಗಿಸಿದ್ದಾರೆ. ಜನಮನವನ್ನು ಬಹು ಬೇಗ ಗೆಲ್ಲಬಲ್ಲರು. ವಯಲಿನ್‌ನಲ್ಲಿ ಸಹಕರಿಸಿದ ವೈಭವ್ ರಮಣಿ, ಮೃದಂಗದ ಅಕ್ಷಯ ಆನಂದ್ ಹಾಗೂ ಖಂಜಿರದ ಕಾರ್ತಿಕ್ ಇನ್ನಂಜೆ ಅವರ ನುಡಿ ಸಾಣಿಕೆ ಹಿತಮಿತವಾಗಿತ್ತು.