ಮಂಗಳೂರು : ಆಕೃತಿ ಆಶಯ ಪಬ್ಲಿಕೇಶನ್ಸ್ ಮಂಗಳೂರು ಹಾಗೂ ಸಂತ ಅಲೋಶಿಯಸ್ ಪರಿಗಣಿತ ವಿ. ವಿ. ಕನ್ನಡ ವಿಭಾಗ ಇವುಗಳ ಸಹಯೋಗದೊಂದಿಗೆ ಸುಲೋಚನಾ ಪಚ್ಚಿನಡ್ಕ ಇವರ ಕೃತಿಗಳ ಲೋಕಾರ್ಪಣಾ ಸಮಾರಂಭವು 24 ಆಗಸ್ಟ್ 2024ರ ಶನಿವಾರದಂದು ಸಂತ ಅಲೋಶಿಯಸ್ ಪರಿಗಣಿತ ವಿ. ವಿ. ಇದರ ಸಾನ್ನಿಧ್ಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಹಿರಿಯ ವಿದ್ವಾಂಸ ಹಾಗೂ ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಪ್ರಾದೇಶಿಕ ವಿವರಗಳನ್ನು ಬಳಸಿಕೊಂಡು ಸಾರ್ವತ್ರಿಕಗೊಳಿಸುವುದು ಕೃತಿಕಾರರ ಮುಂದಿರುವ ಸವಾಲಾಗಿದೆ. ಡಾ. ಶಿವರಾಮ ಕಾರಂತರ ಕೃತಿಗಳಲ್ಲಿ ಸಾಕಷ್ಟು ಪ್ರಾದೇಶಿಕ ವಿವರಗಳು ದೊರೆತರೂ ಅವರ ಕೃತಿಗಳು ಪ್ರಾದೇಶಿಕವಾಗಿ ಸೀಮಿತಗೊಳ್ಳದೆ ಸಾರ್ವತ್ರಿಕ ವಿಚಾರಗಳನ್ನು ತಿಳಿಸುತ್ತದೆ. ಯುವ ಬರಹಗಾರರ ವಿಸ್ತ್ರತವಾದ ಓದು ಬರವಣಿಗೆಯನ್ನು ಇನ್ನಷ್ಟು ಶಕ್ತಗೊಳಿಸುತ್ತದೆ. ಸುಲೋಚನ ಪಚ್ಚಿನಡ್ಕ ಇವರ ಕೃತಿ ಪ್ರಾದೇಶಿಕ ವಿವರ ಒಳಗೊಂಡಿದೆ.” ಎಂದರು.
ಕೃತಿ ಪರಿಚಯಿಸಿದ ರಘು ಇಡ್ಕಿದು ಮಾತನಾಡಿ “ಸುಲೋಚನಾ ಪಚ್ಚಿನಡ್ಕ ಇವರ ಚುಟುಕುಗಳು ಕಾವ್ಯ ಬಿಂದುವಾಗಿದೆ. ಅವರ ಕೃತಿಯಲ್ಲಿ ಹೆಣ್ಣಿನ ಬಗೆಗಿನ ಒಳ ನೋಟವಿದೆ. ಹೆಣ್ಣೆಂದರೆ ಸುಟ್ಟರೂ ಮತ್ತೆ ಚಿಗುರುವ ಗುಣ ಇದೆ. ಅದನ್ನು ಕವಿತೆಯಲ್ಲಿ ಪ್ರತಿಪಾದಿಸಿದ್ದಾರೆ. ಬದುಕಿನ ವಿವಿಧ ಆಯಾಮಗಳ ಸುತ್ತ ತೆರೆದುಕೊಳ್ಳುವ ಅವರ ಕವಿತೆಗಳು ನಮಗೆ ಆಪ್ತವಾಗುತ್ತದೆ.” ಎಂದರು.
ಡಾ. ಯೋಗೀಶ್ ಕೈರೋಡಿ ಮಾತನಾಡಿ “ಸುಲೋಚನಾ ಪಚ್ಚಿನಡ್ಕ ಅವರ ‘ಬಿಸಿಲು ಕುದುರೆಯ ದಾರಿ’ ಕಾದಂಬರಿ ಕಾರಂತರ ‘ಸರಸಮ್ಮನ ಸಮಾಧಿ’ ಮಾದರಿಯ ವಿಶಿಷ್ಟ ಕೃತಿಯಾಗಿದೆ. ಎಂದರು.
ಕೃತಿ ರಚಿಸಿದ ಸುಲೋಚನ ಪಚ್ಚಿನಡ್ಕ ಮಾತನಾಡಿ “ನನ್ನ ಕೃತಿ ರಚನೆಯ 23 ವರ್ಷಗಳಲ್ಲಿ ನಾನು ಕೇಳಿದ ಸಂಗತಿಗಳನ್ನು ನನ್ನ ಬಾರಹಗಳು ಒಳಗೊಂಡಿದೆ.” ಎಂದರು.
ಮಂಗಳೂರು ಸಂತ ಅಲೋಶಿಯಸ್ ಪರಿಗಣಿತ ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಮಹಾಲಿಂಗ ಭಟ್ ಉಪಸ್ಥಿತರಿದ್ದರು. ಆಕೃತಿ ಪ್ರಕಾಶನದ ಕಲ್ಲೂರು ನಾಗೇಶ್ ಸ್ವಾಗತಿಸಿ, ಡಾ. ದಿನೇಶ್ ಕಾರ್ಯಕ್ರಮ ನಿರೂಪಿಸಿ, ಸುಲೋಚನ ಪಚ್ಚಿನಡ್ಕ ವಂದಿಸಿದರು.