ಧಾರವಾಡ : ಆಲೂರು ವೆಂಕಟರಾವ್ ಸಭಾಭವನದಲ್ಲಿ ದಿನಾಂಕ 24 ಆಗಸ್ಟ್ 2024ರಂದು ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳ ಸಹಯೋಗದಲ್ಲಿ ಧಾರವಾಡದ ಸಂಗೀತದ ಪರಿಚಾರಕ ಅನಂತ ಹರಿಹರ ಅವರ ಸಂಸ್ಮರಣೆಯಲ್ಲಿ ನಡೆಯುತ್ತಿರುವ ಎರಡನೇ ದಿನದ ಸಂಗೀತೋತ್ಸವದಲ್ಲಿ ಗಾಯನ-ವಾದನಗಳ ನಿನಾದ ಹರಿದುಬಂತು.
ಆರಂಭದಲ್ಲಿ ಉ. ಫಯ್ಯಾಜ್ ಖಾನರ ಶಿಷ್ಯ-ಪುತ್ರ ಸರಫರಾಜ್ ಖಾನರಿಂದ ಸಾರಂಗಿ ತಂತುಗಳ ವಾದನದಿಂದ ಮನಮೋಹಕ ಸ್ವರ ತರಂಗಗಳು ಝೇಂಕರಿಸಿದವು. ಅವರು ರಾಗ ಜನಸಮ್ಮೋಹಿನಿಯಲ್ಲಿ ಆಲಾಪ ಜೋಡ್ ಗಳನ್ನು ಸುಂದರವಾಗಿ ನುಡಿಸಿದರು. ಇವರಿಗೆ ಉ. ನಿಸಾರ್ ಅಹಮದ್ ತಬಲಾ ಸಾಥ್ ನೀಡುವ ಮೂಲಕ ಸಂಗೀತ ಆಸಕ್ತರ ಗಮನ ಸೆಳೆದರು.
ನಂತರ ವೀರೇಶ್ವರ ಪುಣ್ಯಾಶ್ರಮದ ಪರಂಪರೆಯ ಯುವ ಪ್ರತಿಭೆ ಅಯ್ಯಪ್ಪಯ್ಯ ಹಲಗಲಿಮಠ ಅವರು ಸಾಯಂಕಾಲೀನ ಸಂಧಿಪ್ರಕಾಶ ರಾಗ, ಪೂರ್ವಿ ಥಾಟನ್ ಶ್ರೀ ಪ್ರಸ್ತುತಪಡಿಸಿದರು. ವಿಲಂಬಿತ್ ಏಕತಾಲ್ ನಲ್ಲಿ “ಮೋರಾ ಆಸರಾ…”, ಧೃತ್ ತೀನತಾಲ್ ನಲ್ಲಿ “ಬಾಜೆ ಮುರಲಿಯಾ ಮೋಹನ…” ಬಂದಿಶಗಳನ್ನು ಹಾಗೂ ಮನಮೋಹಕ ಮೀಂಡ್, ತಾನುಗಳೊಂದಿಗೆ ಪ್ರಬುದ್ಧ ಗಾಯನವನ್ನು ಸಾದರಪಡಿಸಿದರು. ಭೂಪ ರಾಗದಲ್ಲಿ ‘ಮಂತ್ರಾಲಯ ನಿವಾಸಾ ಉತ್ತಮ ಹಂಸ…’ ವಿಜಯದಾಸರ ಕೃತಿಯೊಂದಿಗೆ ಸಂಗೀತ ಕೇಳುಗರನ್ನು ಮಂತ್ರಮುಗ್ಧಗೊಳಿಸಿದರು. ಇದೇ ರೀತಿ ವೀಣಾ ಮಠ ಅರುವ ಪ್ರಸ್ತುತಪಡಿಸಿದ ವಯೋಲಿನ್ ವಾದನ ಸಂಗೀತ ಆಸಕ್ತರ ಮನ ತಣಿಸಿತು.
ಹಿರಿಯರಾದ ಹರ್ಷ ಡಂಬಳ, ಪಂಡಿತ್ ಬಿ.ಎಸ್. ಮಠ, ವಿಕ್ರಮ ಶಿರೂರ, ಡಾ. ಕೃಷ್ಣ ಕಟ್ಟಿ, ಜಿ.ಸಿ. ತಲ್ಲೂರ, ರಮಾಕಾಂತ ಜೋಶಿ, ಸಮೀರ್ ಜೋಶಿ, ಲೋಹಿತ್ ನಾಯಕರ ಇತರರು ಉಪಸ್ಥಿತರಿದ್ದರು.