ಮಂಗಳೂರು : ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿನಾಂಕ 17 ಆಗಸ್ಟ್ 2024ರಂದು ಸನಾತನ ನಾಟ್ಯಾಲಯದ ನೃತ್ಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಭರತನಾಟ್ಯ ವೈವಿಧ್ಯ ‘ಸನಾತನ ನೃತ್ಯೋತ್ಸವ’ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾರ್ಕಳದ ಅಕ್ಷಯ ಗೋಖಲೆ ಇವರು ‘ಲಕ್ಷ್ಮೀಯೂ ಅವಳೇ ದುರ್ಗೆಯೂ ಅವಳೇ’ ಎಂಬ ವಿಷಯದ ಬಗ್ಗೆ ಮಾತನಾಡಿ “ಹೆಣ್ಣು ಎಂದರೆ ಹೆಂಡತಿ ಎಂದು ಜಗತ್ತಿನಲ್ಲಿ ಎಲ್ಲರೂ ಸ್ವೀಕರಿಸಿದರೆ, ಭಾರತದಲ್ಲಿ ಆಕೆಯನ್ನು ಗೃಹ್ಯಾಗ್ನಿ ಎನ್ನುವ ಧರ್ಮಾಗ್ನಿಯನ್ನು ತರುತ್ತಾಳೆ. ಮನೆಯ ಯಜಮಾನನನ್ನು ಗೃಹಸ್ಥನನ್ನಾಗಿ ಮಾಡುತ್ತಾಳೆ ಎಂದು ಭಾವಿಸಿರುವುದು ಭಾರತೀಯ ಸಮಾಜ. ದುರ್ಗೆಯನ್ನು ಜಗಜ್ಜನನಿ ಎಂದು ಕರೆಯುತ್ತೇವೆ. ಕಲಿಯುಗದಲ್ಲಿ ಭಾರತದ ಪ್ರತಿಯೊಂದು ಹೆಣ್ಣಿನಲ್ಲಿಯೂ ದುರ್ಗೆಯ ಅಂಶವಿದೆ. ಜ್ಞಾನ, ಕರುಣೆ, ಪ್ರೀತಿ, ವಿಶ್ವಾಸ ಜೊತೆಗೆ ಯಾವಾಗೆಲ್ಲ ರಾಕ್ಷಸರ ಸಂಹಾರದ ಸಮಯದಲ್ಲಿ ವಧಿಸುವ ದೇವಿಯ ರೂಪವನ್ನೂ ತಾಳುತ್ತಾಳೆ ಎಂಬುದನ್ನು ಮರೆಯಬಾರದು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ಸಂಭ್ರಮಿಸುವ, ಸ್ವಾತಂತ್ರ್ಯ ತಂದುಕೊಡಲು ಶ್ರಮಿಸಿದವರನ್ನು ಗೌರವಿಸಲು ಸಿಕ್ಕಿದ ಅವಕಾಶವನ್ನು ತಿರಸ್ಕರಿಸಬಾರದು. ಜೊತೆಗೆ ಸಾಮಾಜಿಕವಾಗಿ ಹೆಣ್ಣು ಸಶಕ್ತವಾಗಿ ಎದ್ದುನಿಲ್ಲುವಂತೆ ಆಕೆಗೆ ಶಿಕ್ಷಣವನ್ನು ಕೊಡಬೇಕು. ಆ ಜವಾಬ್ದಾರಿಯನ್ನು ಮರೆಯಬಾರದು” ಎಂದು ಕಿವಿ ಮಾತು ಹೇಳಿ ದೇಶರಕ್ಷಣೆಯ ವಿಷಯಕ್ಕೆ ಬಂದಾಗ ಪತಿಗಿಂತ ದೇಶವೇ ಮೊದಲು ಎಂದು ಭಾವಿಸಿದ ಉಳ್ಳಾಲದ ರಾಣಿ ಅಬ್ಬಕ್ಕನ ಕಥೆಯೇ ನಮ್ಮ ಮುಂದಿದೆ” ಎಂದು ಹೇಳಿದರು.
ಅತಿಥಿಗಳಾಗಿ ಭಾಗವಹಿಸಿದ ಸಂಜೀವಿನಿ ಹೋಲಿಸ್ಟಿಕ್ ವೆಲ್‌ನೆಸ್ ಸೆಂಟರ್‌ನ ರೇವತಿ ಸನಿಲ್, “ಭಾರತ ದೇಶವು ವಿಭಿನ್ನತೆಯಲ್ಲಿ ಏಕತೆಯನ್ನು ಸೂಚಿಸುವ ದೇಶದ ಮಹತ್ವವನ್ನು ಅರಿಯಬೇಕು” ಎಂದು ಹೇಳಿದರು. ಅಲ್ಲದೆ ಸ್ವಾತಂತ್ರ್ಯ ಉತ್ಸವದ ಸಂದರ್ಭದಲ್ಲಿ ನಾಟ್ಯಾಲಯದ ವಿದ್ಯಾರ್ಥನಿಯರಿಗೆ ಶುಭಾಶಯಗಳನ್ನು ಕೋರಿದರು. ಸನಾತನ ನಾಟ್ಯಾಲಯದ ನಿರ್ದೇಶಕರಾದ ಚಂದ್ರಶೇಖರ ಕೆ. ಶೆಟ್ಟಿ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.
ಸನಾತನ ನಾಟ್ಯಾಲಯದಲ್ಲಿ ಭರತನಾಟ್ಯ ಕಲಿತು 2020-21ನೇ ಸಾಲಿನಲ್ಲಿ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆ ಬರೆದ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಈ ವಿದ್ಯಾರ್ಥಿನಿಯರ ಪಟ್ಟಿಯನ್ನು ವಿಜಿತಾ ಶೆಟ್ಟಿ ಮತ್ತು ವಿದುಷಿ ಛಾಯಶ್ರೀ ವಾಚಿಸಿದರು. ಬಳಿಕ ನಾಟ್ಯಗುರು ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ನಿರ್ದೇಶನದಲ್ಲಿ ಸನಾತನ ನಾಟ್ಯಾಲಯದ ವಿದ್ಯಾರ್ಥಿನಿಯರು ಭರತನಾಟ್ಯ ಕಾರ್ಯಕ್ರಮ ಪ್ರಸ್ತುತಪಡಿಸಿದರು.