ಕಾಸರಗೋಡು : ಗಮಕ ಕಲಾ ಪರಿಷತ್ತು ಗಡಿನಾಡ ಘಟಕ ಕಾಸರಗೋಡು, ಸಿರಿಗನ್ನಡ ಸಾಂಸ್ಕೃತಿಕ ವೇದಿಕೆ ಗಡನಾಡ ಘಟಕ ಕಾಸರಗೋಡು, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ , ತರಂಗಿಣಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಕೈರಲಿ, ಕುಟುಂಬಶ್ರೀ ಘಟಕ ಸುಬ್ಬಯ್ಯ ಕಟ್ಟೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಗಮಕ ಶ್ರಾವಣ ಕಾರ್ಯಕ್ರಮವು 21 ಆಗಸ್ಟ್ 2024ರಂದು ಸುಬ್ಬಯ್ಯಕಟ್ಟೆ ಬಿ. ಎ. ಮಹಮ್ಮದ್ ಸ್ಮಾರಕ ಮಂದಿರದಲ್ಲಿ ನಡೆಯಿತು.
ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಟಿ. ಶಂಕರನಾರಾಯಣ ಭಟ್ಟ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಖ್ಯಾತ ವಿದ್ವಾಂಸ ಹಾಗೂ ನಾಡೋಜ ಕವಿ ಕಯ್ಯಾರರ ಸುಪುತ್ರ ಡಾ. ಪ್ರಸನ್ನ ರೈ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕುಡಾಲು ವಾರ್ಡಿನ ಜನ ಪ್ರತಿನಿಧಿ ಹಾಗೂ ತರಂಗಿಣಿಯ ಗೌರವಾಧ್ಯಕ್ಷರಾದ ಶ್ರೀ ಅಶೋಕ ಭಂಡಾರಿ ಹಾಗೂ ಖ್ಯಾತ ಲೇಖಕ ಮತ್ತು ಕಾಸರಗೋಡು ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀ ರವಿ ನಾಯ್ಕಾಪು ಭಾಗವಹಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಕೃಷಿಕ, ಸಮಾಜಿಕ ಮುಂದಾಳು, ಸುಬ್ಬಯ ಕಟ್ಟೆಯ ರಿಫಯ್ಯಾ ಜುಮಾ ಮಸೀದಿಯ ಜಮಾಯತ್ ಇದರ ಅಧ್ಯಕ್ಷರಾದ ಬಿ. ಕೆ. ಖಾದರ್ ಹಾಜಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರಮಟ್ಟದ ಪ್ರಚಾರಕನಾಗಿ ಸೇವೆ ಸಲ್ಲಿಸಿದ ಚೇವಾರು, ಬಾಯಾಡಿ ಶ್ರೀ ವೆಂಕಟರಮಣ ಭಟ್ ಇವರಿಗೆ ವಂದನಾರ್ಪಣೆ ಸಲ್ಲಿಸಲಾಯಿತು.
ಹಿರಿಯರಾದ ಶ್ರೀ ಮರುವಳ ನಾರಾಯಣ ಭಟ್, ಕುಂಟಂಗೇರಡ್ಕ ಶ್ರೀವಿಷ್ಣುಮೂರ್ತಿ ಒತ್ತೆಕೋಲ ಸೇವಾ ಸಮಿತಿ ಅಧ್ಯಕ್ಷರಾದ ಶ್ರೀ ಯಜಮಾನ್ ರಾಮಕೃಷ್ಣ ಭಂಡಾರಿ, ರಿಫಯ್ಯಾ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಶ್ರೀ ಲತೀಫ್ ಬಿ. ಎ. ಮುಂತಾದವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು .
ಸಿರಿಗನ್ನಡ ವೇದಿಕೆಯ ಗಡಿನಾಡ ಘಟಕದ ಅಧ್ಯಕ್ಷ ಹಾಗೂ ವಿಶ್ರಾಂತ ಗುರುಗಳಾದ ಶ್ರೀ ಬಿ. ವಿ. ಕುಳಮರ್ವ ಪ್ರಾಸ್ತಾವಿಕವಾಗಿ ಮಾತನಾಡಿ, ಬಿ. ಎ. ಮೊಹಮ್ಮದ್ ಸ್ಮಾರಕ ಗ್ರಂಥಾಲಯದ ಅಧ್ಯಕ್ಷ ಹಾಗೂ ತರಂಗಿಣಿ ಸಂಸ್ಥೆಯ ಸಂಘಟನಾ ಕಾರ್ಯದರ್ಶಿಯಾದ ಶ್ರೀ ಶಿವಪ್ರಸಾದ ಶೆಟ್ಟಿ ಸ್ವಾಗತಿಸಿ, ಎಸ್. ಕೆ. ಬಾಲಕೃಷ್ಣ ನಿರೂಪಿಸಿ, ಮಾಜಿ ಪಂಚಾಯತ್ ಸದಸ್ಯೆ ಹಾಗೂ ಕೈರಲಿ ಕುಟುಂಬಶ್ರೀ ಇದರ ಶ್ರೀಮತಿ ಪುಷ್ಪಾ ಕಮಲಾಕ್ಷ ಧನ್ಯವಾದ ಸಮರ್ಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಶ್ರೀ ವಿಷ್ಣು ಶರ್ಮ ನೂಜಿಲ ನೀರ್ಚಾಲು ಹಾಗೂ ಡಾ. ಶ್ರೀಶಕುಮಾರ್ ಪಂಚಿತ್ತಡ್ಕ ಇವರಿಂದ ರಾಮಾಯಣದ ಕಥಾಭಾಗದ ಗಮಕ ವಾಚನ ವ್ಯಾಖ್ಯಾನದೊಂದಿಗೆ ಗಮಕ ಶ್ರಾವಣ ಕಾರ್ಯಕ್ರಮವು ನಡೆಯಿತು.