ಕುತ್ತಾರು : ಬಾಲ ಸಂರಕ್ಷಣಾ ಕೇಂದ್ರ ಕುತ್ತಾರು ಮತ್ತು ಮಂಗಳಾ ಸೇವಾ ಸಮಿತಿ ಟ್ರಸ್ಟ್ ಇದರ ವತಿಯಿಂದ ಉಮೇಶ ಕರ್ಕೇರ ಮತ್ತು ಬಳಗದವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ಗುರುದಕ್ಷಿಣೆ ಎಂಬ ಪ್ರಸಂಗದ ಯಕ್ಷಗಾನ ಬಯಲಾಟದ ಸಭಾ ಕಾರ್ಯಕ್ರಮವು ದಿನಾಂಕ 14 ಆಗಸ್ಟ್ 2024ರಂದು ಕುತ್ತಾರಿನ ಬಾಲ ಸಂರಕ್ಷಣಾ ಕೇಂದ್ರದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಂವಿಧಾನ ತಜ್ಞ, ಮಂಗಳ ಸೇವಾ ಟ್ರಸ್ಟಿನ ಸಂಚಾಲಕ ಡಾ. ಪಿ. ಅನಂತಕೃಷ್ಣ ಭಟ್ ಇವರು ‘ಸಂವಿಧಾನ – ಯಕ್ಷಗಾನ’ದ ಬಗ್ಗೆ ಪ್ರವಚನ ನೀಡುತ್ತಾ “ಈ ದೇಶದ ಸಂವಿದಾನಕ್ಕೆ ಈಗ ಎಪ್ಪತ್ತೈದರ ಸಂಭ್ರಮ. ನಿಯಮಗಳು ಕಾನೂನು ರೀತ್ಯಾ ಜಾರಿಯಾಗಿ ದೇಶ ಸನ್ನಡತೆಯಲ್ಲಿ ಮುನ್ನಡೆಯುವಂತೆ ನಡೆಯುತ್ತಿದೆ. ಆದರೆ ಯಕ್ಷಗಾನವೂ ಅಲಿಖಿತ ಸಂವಿಧಾನವನ್ನು ಒಗ್ಗೂಡಿಸಿಕೊಂಡು ಸಂಸ್ಕೃತಿ-ಸಂಸ್ಕಾರಗಳನ್ನು ಪ್ರಚುರ ಪಡಿಸುತ್ತಾ ಧರ್ಮ ಜಾಗೃತಿ ಮೂಡಿಸುತ್ತಾ ಬರುತ್ತಿದೆ. ಇದು ಈ ದೇಶದ ಹೆಗ್ಗಳಿಕೆಯೂ ಹೌದು. ಇದನ್ನು ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯುವಂತೆ ಮೂಡಿಸುವುದು ನಮ್ಮ ಕರ್ತವ್ಯ. ಇದಕ್ಕೆ ಸರಕಾರ, ಸಂಘ ಸಂಸ್ಥೆಗಳು ಸಹಕಾರಿಯಾಗಿ ನಿಂತರೆ ಅದು ಇನ್ನೂ ಹೊಳಪಾಗಿ ಹೊಳೆಯುತ್ತದೆ” ಎಂದು ಹೇಳಿದರು.
ಅತಿಥಿಗಳಾಗಿ ಸೇವಾ ಟ್ರಸ್ಟಿನ ಬಿ.ಆರ್. ಪಂಡಿತ್, ಯಕ್ಷಕಲಾವಿದ ಕುತ್ತಾರುಗುತ್ತು ಪ್ರಭಾಕರ ಶೆಟ್ಟಿ, ಪ್ರಬಂಧಕಿ ಸರೂ, ಮಮತಾ, ಶಿಲ್ಪಾ ಮುಂತಾದವರು ಅತಿಥಿಗಳಾಗಿದ್ದರು. ಕುಮಾರಿ ತೃಷಾ ಇವರು ಪ್ರಾರ್ಥಿಸಿ, ವಿಜಯಲಕ್ಮೀ ಧನ್ಯವಾದ ಅರ್ಪಿಸಿದರು. ಬಳಿಕ ಲಕ್ಮೀನಾರಾಯಣ ಹೊಳ್ಳರ ಹಿಮ್ಮೇಳದೊಂದಿಗೆ ‘ಗುರುದಕ್ಷಿಣೆ’ ಎಂಬ ಯಕ್ಷಗಾನ ಬಯಲಾಟ ಪ್ರಸ್ತುತಗೊಂಡಿತು.