ಧಾರವಾಡ : ಧಾರವಾಡದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ್ದ ಮೂರು ದಿನಗಳ ‘ಅನಂತ ಸ್ವರ ನಮನ’ ಸಂಗೀತೋತ್ಸವದ ಸಮಾರೋಪ ಸಮಾರಂಭವು ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ದಿನಾಂಕ 25 ಆಗಸ್ಟ್ 2024ರಂದು ಸಂಪನ್ನಗೊಂಡಿತು.
ಈ ಕಾರ್ಯಕ್ರಮದಲ್ಲಿ ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಇವರು ಮಾತನಾಡಿ “ಅನಂತ ಹರಿಹರರು ಯುವ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ಧಾರವಾಡ ಸಂಗೀತ ಕ್ಷೇತ್ರದ ಬೆಳೆವಣಿಗೆಗೆ ಅನಂತ ಹರಿಹರ ಅವರ ಕೊಡುಗೆ ಅಪಾರ. ಅನಂತ ಹರಿಹರ ಅವರನ್ನು ಕಳೆದುಕೊಂಡಿದ್ದು ಸಂಗೀತದ ರತ್ನ ಕಳಿಚಿದಂತಾಗಿದೆ. ಅನಾಮಿಕ ಸಂಗೀತ ಸೇವಕರಾಗಿದ್ದ ಅವರು ಪ್ರತಿ ಸಂಗೀತ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಆಯೋಜಿಸುವಲ್ಲಿ ಪ್ರಸಿದ್ಧರಾಗಿದ್ದರು. ಈ ಮೂಲಕ ಆರು ದಶಕಗಳ ಕಾಲ ಸಂಗೀತ-ನೃತ್ಯ-ಸಾಂಸ್ಕೃತಿಕ ಲೋಕದಲ್ಲಿ ಕಲಾವಿದರು ಹಾಗೂ ಶ್ರೋತೃವರ್ಗದ ಕೊಂಡಿಯಾಗಿದ್ದರು ಎಂದು ಹೇಳಿದರು.
ಪಂಡಿತ್ ಬಿ.ಎಸ್. ಮಠ ಮಾತನಾಡಿ “ಅನಂತ ಹರಿಹರರು ಎಲ್ಲಾ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಅವರ ಸಹಕಾರವನ್ನು ಮರೆಯುವಂತಿಲ್ಲ. ಆದ್ದರಿಂದ ಕಲಾವಿದರ ಸ್ಮರಣೆಯಲ್ಲಿ ಅನಂತ ಹರಿಹರರು ಸದಾ ಇರುತ್ತಾರೆ” ಎಂದರು. ಪಂಡಿತ್ ಶ್ರೀಪಾದ ಹೆಗಡೆ, ಮಾಜಿ ಮೇಯರ್ ಈರೇಶ ಅಂಚಟಗೇರಿ ಮಾತನಾಡಿದರು. ಎಚ್.ವಿ. ಕಾಖಂಡಕಿ, ಡಾ. ರಮಾಕಾಂತ ಜೋಶಿ ಇತರರು ಉಪಸ್ಥಿತರಿದ್ದರು.
ಅನಂತ ಹರಿಹರ ಸಂಸ್ಮರಣೆಯ ‘ಅನಂತ ಸ್ವರ ನಮನ’ ಸಂಗೀತೋತ್ಸವದ ಮೂರನೇ ದಿನದ ಕಾರ್ಯಕ್ರಮವು ನಿಖಿಲ್ ಜೋಶಿಯವರ ಸಿತಾರ ವಾದನದೊಂದಿಗೆ ಆರಂಭಗೊಂಡಿತು. ಸಿತಾರ ತಂತುಗಳಿಂದ ಗಾವತಿ ರಾಗವನ್ನು ಪ್ರಸ್ತುತಪಡಿಸಿದ ಇವರಿಗೆ ಅಕ್ಷಯ ಭಟ್ಟ ತಬಲಾ ಸಾಥ್ ನೀಡಿದರು. ನಂತರ ಯುವ ಕಲಾವಿದೆ ಶಿವಾನಿ ಮಿರಜಕರ ಜೈನ ಇವರು ಭೂಪಾಲಿ ರಾಗವನ್ನು ಸಾದರಪಡಿಸಿದರು. ವಿಲಂಬಿತ್ ಏಕತಾಲ್ ನಲ್ಲಿ “ಜಬ ಮೇ ಜಾನಿ…”, ಧೃತ್ ತೀನತಾಲದಲ್ಲಿ “ಮೊರಾ ಜಾಂಝ ಮಂದಿಲಗಾ…” ಪ್ರಸ್ತುತ ಪಡಿಸಿದ ಇವರಿಗೆ ಶ್ರೀಧರ ಮಾಂಡ್ರೆ ತಬಲಾ ಹಾಗೂ ಸತೀಶ ಭಟ್ಟ ಹೆಗ್ಗಾರ ಹಾರ್ಮೋನಿಯಂ ಸಾಥ್ ನೀಡಿದರು. ಕೊನೆಯಲ್ಲಿ ಧಾರವಾಡ ಘರಾಣೆಯ ಯುವ ಪ್ರತಿಭೆ ಮೊಹಸಿನ್ ಖಾನರ ಸಿತಾರ ವಾದನದಲ್ಲಿ ಪೂರಿಯಾ ಕಲ್ಯಾಣ ರಾಗವನ್ನು ಪ್ರಸ್ತುತಪಡಿಸಿ ನೆರೆದವರನ್ನು ಮಂತ್ರಮುಗ್ಧಗೊಳಿಸಿದರು. ಇವರಿಗೆ ಯುವ ತಬಲಾ ಪ್ರತಿಭೆ ಹೇಮಂತ ಜೋಶಿ ಸಮರ್ಥ ತಬಲಾ ಸಾಥ್ ನೀಡಿದರು. ಧಾರವಾಡದ ಪ್ರಬುದ್ದ ಗಾಯಕ ಕುಮಾರ ಮರಡೂರ ಇವರ ಗಾಯನದೊಂದಿಗೆ ಈ ಕಾರ್ಯಕ್ರಮಕ್ಕೆ ತೆರೆ ಬಿತ್ತು.