ಕಲಬುರ್ಗಿ : ವಿಶ್ವ ವಿದ್ಯಾಲಯ ಮತ್ತು ಗಜಲ್ ಎಕಾಡೆಮಿಗಳ ಸಹಯೋಗದಲ್ಲಿ ಪ್ರಥಮ ಅಂತರಾಷ್ಟ್ರೀಯ ಗಜಲ್ ಸಮ್ಮೇಳನವು ದಿನಾಂಕ 25 ಆಗಸ್ಟ್ 2024ರಂದು ಕಲಬುರ್ಗಿಯಲ್ಲಿ ನಡೆಯಿತು.
ಖ್ಯಾತ ಗಜಲ್ ಸಾಹಿತಿ ಪ್ರಭಾವತಿ ದೇಸಾಯಿ ಇವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ‘ಗಜಲ್ ನಡೆದು ಬಂದ ಹಾದಿ’ ಎಂಬ ಗೋಷ್ಠಿಗೆ ಚಾಲನೆ ನೀಡದ ಮಂಗಳೂರಿನ ಕಣಚೂರು ಹಾಗೂ ಮಂಗಳಾ ಆಸ್ಪತ್ರೆಯ ವೈದ್ಯ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿಯವರು ಮಾತನಾಡಿ “ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣ ಪರ್ಷ್ಯಾದ ಗಜಲ್ ಇತ್ತಣ ಕರ್ನಾಟಕಕ್ಕೂ…… ಎಂಬ ಹಾಗೆ ಪರ್ಷಿಯಾದಿಂದ ಕರ್ನಾಟಕಕ್ಕೆ ಗಜಲ್ ನಡೆದು ಬಂದ ದಾರಿಯಾಯಿತು. ಹೊಸತನ್ನು ಹೊಸೆವ ಆಸಕ್ತಿ ಗಜಲ್ ಬೆಳವಣಿಗೆಗೆ ಕಾರಣ. ಭಾರತದ ಹೆಸರಾಂತ ಗಜಲ್ಕಾರರ ಬಗೆಗೆ ಹೇಳುತ್ತಾ ಕರ್ನಾಟಕ ಇಂದು ಅತಿ ಹೆಚ್ವು ಗಜಲ್ ಬರಹಗಾರರನ್ನು ಹೊಂದಿದೆ. ಭಾವನೆಗೆ ನಿಯಮಾವಳಿಗಳ ಮೂಲಕ ಕೊಡುವ ಚೌಕಟ್ಟು ಗಜಲ್ ಗೆ ಮೂಲ ಸ್ತಂಭ” ಎಂದು ಹೇಳಿದರು.
ಖ್ಯಾತ ಕವಿ ಅಲ್ಲಾಗಿರಿ ರಾಜರ ಅಧ್ಯಕ್ಷತೆಯಲ್ಲಿ ನಡೆದ ಈ ಗೋಷ್ಠಿಯಲ್ಲಿ ಶ್ರೀದೇವಿ ಕೆರೆಮನೆ, ಯಾಕೊಳ್ಳಿ ಹಾಗೂ ಅರುಣಾ ನರೇಂದ್ರರವರು ಪ್ರಬುದ್ಧ ಪ್ರಬಂಧ ಮಂಡಿಸಿದರು. ಸಂಘಟಕ ಮಹೀಪಾಲ ರೆಡ್ಡಿ, ಹೈತೋ ಗಜಲ್ ಎಕಾಡೆಮಿ ಅಧ್ಯಕ್ಷ ರಂಗಸ್ವಾಮಿ, ರತ್ನ ರಾಯ ಮಲ್ಲ, ಸಿದ್ಧರಾಮ ಹೊನಕಲ್, ಹಾ.ಮ. ಸತೀಶ ಮತ್ತು ಆಕಾಶವಾಣಿಯ ಸದಾನಂದ ಪೆರ್ಲ, ಡಾ. ಹಸೀನಾ ಶಿವಮೊಗ್ಗ , ನೂರ್ ಮಹಮ್ಮದ್, ನಂರುಶಿ ಮತ್ತು ಅನೇಕ ಖ್ಯಾತನಾಮರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನೂರು ಕವಿಗಳ ರಚಿತ ಗಜಲ್ ಸಂಕಲನ ಬಿಡುಗಡೆ ಈ ಸಂದರ್ಭದ ವಿಶೇಷತೆಗಳಲ್ಲೊಂದು. ನಟ ನಿರೂಪಕ ಗಾಯಕ ಶ್ರೀನಿವಾಸ ಪ್ರಭು ಪ್ರಮುಖ ಆಕರ್ಷಣೆಯಾಗಿದ್ದರು.