ಹೆಬ್ರಿ : ಅಕ್ಷರ ಸಾಹಿತ್ಯ ಸಂಘ ಹೆಬ್ರಿ ಮತ್ತು ಶರಣ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಇವುಗಳ ಸಹಯೋಗದಲ್ಲಿ ವಚನ ಸಾಹಿತ್ಯ ಸಂಭ್ರಮ, ಸಂಸ್ಥಾಪನಾ ದಿನ ಮತ್ತು ವಚನ ಗಾಯನ ಕಾರ್ಯಕ್ರಮವು ದಿನಾಂಕ 23 ಆಗಸ್ಟ್ 2024ರಂದು ಹೆಬ್ರಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಿರಂಜನ ಚೋಳಯ್ಯ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ “ವಚನ ಸಾಹಿತ್ಯ ವಿಶ್ವ ಸಾಹಿತ್ಯಕ್ಕೆ ಕನ್ನಡದ ಶ್ರೇಷ್ಠ ಕೊಡುಗೆಯಾಗಿದೆ. ಇಂತಹ ವಿಶಿಷ್ಟ ಸಾಹಿತ್ಯ ಬೇರೆ ಎಲ್ಲೂ ಇಲ್ಲ. ಸರಳ ಕನ್ನಡದಲ್ಲಿ ಜನರಿಗೆ ಮಟ್ಟುವ ರೀತಿಯಲ್ಲಿ ವಚನ ಸಾಹಿತ್ಯ ರಚನೆಯಾಗಿದೆ. ಸಾರ್ವಕಾಲಿಕ ಸತ್ಯವನ್ನು ವಚನ ಸಾಹಿತ್ಯ ಹೇಳುತ್ತದೆ” ಎಂದು ಹೇಳಿದರು.
ಉಪಪ್ರಾಂಶುಪಾಲರಾದ ದಿವಾಕರ ಮರಕಾಲ ಎಸ್. ಮಾತನಾಡಿ, “ಸಾಮಾಜಿಕ ಅಂಕುಡೊಂಕುಗಳನ್ನು ತಿದ್ದುವಲ್ಲಿ ವಚನ ಸಾಹಿತ್ಯ ಮತ್ತು ಶರಣರ ಚಳವಳಿಯ ಪಾತ್ರ ಬಹುಮುಖ್ಯವಾದುದು. ಕಾಯಕ ತತ್ವವನ್ನು ಸಾರಿದ ಶರಣ ಸಾಹಿತ್ಯ ಇಂದಿಗೂ ಪ್ರಸ್ತುತ” ಎಂದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ವಿಜಯೇಂದ್ರ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ವಚನ ಗಾಯಕರು ಶಾಲಿನಿ ಮ್ಯೂಸಿಕ್‌ನ ಸಂಗೀತ ಗುರು ಆಶಿಷ್ ಸಾಲ್ಯಾನ್, ಅಕ್ಷರ ಸಾಹಿತ್ಯ ಸಂಘದ ಸಂಚಾಲಕ ಮಂಜುನಾಥ ಕುಲಾಲ್ ಶಿವಪುರ, ಅಕ್ಷರ ಸಾಹಿತ್ಯ ಸಂಘದ ಅಧ್ಯಕ್ಷರಾದ ಶ್ರೀನಿತಾ ಉಪಸ್ಥಿತರಿದ್ದರು. ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ವಚನ ಸಾಹಿತ್ಯ ಸಂಭ್ರಮದ ಅಂಗವಾಗಿ ಹಿಂದೂಸ್ಥಾನಿ ಸಂಗೀತ ಗಾಯಕರಾದ ಆಶಿಷ್ ಸಾಲ್ಯಾನ್ ಮತ್ತು ತಂಡದವರಿಂದ ವಚನ ಗಾಯನ ಕಾರ್ಯಕ್ರಮ ನಡೆಯಿತು. ಹಾರ್ಮೋನಿಯಂನಲ್ಲಿ ಹಿಂದೂಸ್ಥಾನಿ ಗಾಯಕರಾದ ವಿಜಯ ಕುಮಾರ ಎಸ್. ಮೇಟಿ, ತಬಲದಲ್ಲಿ ಸುಮೇಧ ಕಶ್ಯಪ್ ಮತ್ತು ಅರುಣ್ ಸಹಕರಿಸಿದರು. ವಚನ ಸಾಹಿತ್ಯ ಸಂಬಂಧಿ ಪ್ರಬಂಧ, ಭಾಷಣ, ಚಿತ್ರಕಲೆ, ಗಾಯನ ಸ್ಪರ್ಧೆಗಳನ್ನು ನಡೆಸಿ ವಿಜೇತರಾದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಅಕ್ಷರ ಸಾಹಿತ್ಯ ಸಂಘದ ಉಪಾಧ್ಯಕರಾದ ವರ್ಷಾ ಸ್ವಾಗತಿಸಿ, ಅಧ್ಯಾಪಕಿ ಸಂಗೀತ ಶೆಟ್ಟಿ ವಂದಿಸಿ, ವೈಷ್ಣವಿ ಬಹುಮಾನ ಪಟ್ಟಿ ವಾಚಿಸಿದರು. ಇಂಚನಾ ಪ್ರಾರ್ಥಿಸಿ, ಪದಾಧಿಕಾರಿಗಳಾದ ಚಿನ್ಮಯಿ ಮತ್ತು ರಕ್ಷಾ ಕಾರ್ಯಕ್ರಮ ನಿರೂಪಿಸಿದರು.