ಉಡುಪಿ : ಕನ್ನಡ ಜಾನಪದ ಪರಿಷತ್ ಉಡುಪಿ ತಾಲೂಕು ಘಟಕವು ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಪ್ರಥಮ ಕನ್ನಡ ಜಾನಪದ ಸಮ್ಮೇಳನದ ಉದ್ಘಾಟನಾ ಸಮಾರಂಭವು ದಿನಾಂಕ 27 ಆಗಸ್ಟ್ 2024 ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು “ಜಾನಪದ ಕಲೆ ಹಾಗೂ ಕ್ರೀಡೆಯ ಸೊಬಗು, ಸಹಜತೆ, ಆತ್ಮೀಯತೆ ಯಾವುದೇ ಕಲೆಗಳಲ್ಲಿ ನೋಡಲು ಸಾಧ್ಯವಿಲ್ಲ. ಇದು ಎಂದಿಗೂ ಶಾಶ್ವತವಾಗಿರುತ್ತದೆ. ಈ ಮಣ್ಣಿನ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯ ಅಗತ್ಯವಾಗಿ ಮಾಡಬೇಕಾಗಿದೆ. ಈ ಜಾನಪದವು ಈ ನೆಲದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುತ್ತದೆ.” ಎಂದರು.
ಜನಪದ ವಿದ್ವಾಂಸ ಡಾ. ಗಣನಾಥ್ ಎಕ್ಕಾರು ಮಾತನಾಡಿ “ಪ್ರಕೃತಿ ಹಾಗೂ ಕೃಷಿ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸದಿದ್ದರೆ ಜಾನಪದವು ಅಪಾಯದಂಚಿಗೆ ತಲುಪಬಹುದು. ಪ್ರಕೃತಿ ಮತ್ತು ಸಂಸ್ಕೃತಿಯ ಅವಿನಾಭಾವ ಸಂಬಂಧದ ಕುರಿತು ಚರ್ಚಿಸಿ ಅಭಿವೃದ್ಧಿಯ ಚಿಂತನೆ ರೂಪಿಸಬೇಕಿದೆ. ಜಾನಪದ ಕಾಲದಿಂದ ಕಾಲಕ್ಕೆ ಬದಲಾಗುತ್ತ ಹೊಸ ಸ್ವರೂಪ ಪಡೆಯುತ್ತದೆ. ಕಾಲಕಾಲಕ್ಕೆ ಜಾನಪದ ಕಲೆಯ ದಾಖಲೀಕರಣ ಅಗತ್ಯವಿದೆ.” ಎಂದು ಸಲಹೆ ನೀಡಿದರು.
ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ. ರಘುಪತಿ ಭಟ್, ಜಿಲ್ಲಾ ಸೌಟ್ಸ್ ಆ್ಯಂಡ್ ಗೈಡ್ಸ್ ಆಯುಕ್ತ ಜಯಕರ್ ಶೆಟ್ಟಿ ಇಂದ್ರಾಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಂದ್ರ ಅಡಿಗ, ತುಳು ಪಾಡ್ದನ ಕಲಾವಿದ ಅಪ್ಪಿ ಕೃಷ್ಣ ಪಾಣ, ಪಾಣರಾಟದ ಕಲಾವಿದ ನಾಗರಾಜ್ ಪಾಣ, ಜನಪದ ಕಲಾವಿದ ಶಂಕರ್ ದಾಸ್, ಸಂಪ್ರದಾಯ ಹಾಡುಗಳ ಗಾಯಕಿ ಜಾಹ್ನವಿ ಹೇರ್ಳೆ, ಹೌಂದರಾಯನ ವಾಲ್ಗ ಕಲಾವಿದ ಸತೀಶ್ ಕಾಂಚನ್, ಯಕ್ಷಗಾನ ಕಲಾವಿದೆ ಜ್ಯೋತಿ ಮಾಧವ ಪ್ರಭು, ಪರಿಷತ್ತಿನ ತಾಲೂಕು ಅಧ್ಯಕ್ಷೆ ಮಾಯಾ ಕಾಮತ್, ಜಂಟಿ ಕಾರ್ಯದರ್ಶಿ ಮೊಹಮ್ಮದ್ ಫಾರುಕ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಸುವರ್ಣ ಕಟಪಾಡಿ, ಖಜಾಂಚಿ ಚಂದ್ರ ಹಂಗಾರಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.
ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ, ಪರಿಷತ್ ಜಿಲ್ಲಾಧ್ಯಕ್ಷ ಡಾ. ಗಣೇಶ್ ಗಂಗೊಳ್ಳಿ ಪ್ರಸ್ತಾವನೆಗೈದು, ಎನ್. ಆರ್. ದಾಮೋದರ ಶರ್ಮ ನಿರೂಪಿಸಿದರು.