ಕಾಸರಗೋಡು : ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠ ಕಾಸರಗೋಡು ಇಲ್ಲಿನ ಸ್ವಾಮೀಜಿಯವರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಚತುರ್ಥ ಚಾತುರ್ಮಾಸ್ಯದ ಅಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರತಿಷ್ಟಿತ ನೃತ್ಯ ಗುರುಗಳು ಹಾಗೂ ನೃತ್ಯಕಲಾವಿದರ ಒಗ್ಗೂಡುವಿಕೆಯ ‘ನಾಟ್ಯದಾಸೋಹಂ’ ಭರತನಾಟ್ಯ ಕಾರ್ಯಕ್ರಮ ದಿನಾಂಕ 29 ಆಗಸ್ಟ್ 2024ರ ಗುರುವಾರದಂದು ನಡೆಯಿತು.
ಹರಿದಾಸರ ರಚನೆಯನ್ನು ಆಧರಿಸಿದ ವಿಶೇಷ ಆಯೋಜನೆಯ ಪ್ರದರ್ಶನ ಇದಾಗಿದ್ದು, ಶ್ರೀಪಾದರಾಯರು,ವ್ಯಾಸತೀರ್ಥರು, ವಾದಿರಾಜರು, ರಾಘವೇಂದ್ರ ಸ್ವಾಮಿ, ಪುರಂದರದಾಸರು, ಕನಕದಾಸರು, ವಿಜಯದಾಸರು ಹಾಗೂ ಜಗನ್ನಾಥದಾಸರುಗಳ ಕೃತಿಯನ್ನು ಆಯ್ಕೆ ಮಾಡಿಕೊಂಡು ಅವರ ಕಾಲಘಟ್ಟಕ್ಕೇ ಅನುಕ್ರಮವಾಗಿಯೇ ಇಲ್ಲಿ ಪ್ರದರ್ಶಿಸಲಾಯಿತು. ನೃತ್ಯ ಪ್ರದರ್ಶನದಲ್ಲಿ ಕಲಾವಿದರುಗಳಾಗಿ ಕರ್ನಾಟಕ ಕಲಾಶ್ರೀ ಶ್ರೀಮತಿ ವಿದುಷಿ ಶಾರದಾಮಣಿಶೇಖರ್, ಕರ್ನಾಟಕ ಕಲಾಶ್ರೀ ರಾಜಶ್ರೀ ಉಳ್ಳಾಲ, ವಿದ್ಯಾಶ್ರೀ ರಾಧಾಕೃಷ್ಣ, ಮುಂಜುಳಾ ಸುಬ್ರಹ್ಮಣ್ಯ, ಸಾಗರ್ ತುಮಕೂರು, ರಾಧಿಕಾ ಶೆಟ್ಟಿ, ಉನ್ನತ್ ಜೈನ್ ಹಾಸನ ಹಾಗೂ ಮಂಜರೀ ಚಂದ್ರ ಪುಷ್ಪರಾಜ್ ಇವರುಗಳು ಭಾಗವಹಿಸಿದ್ದರು. ಮಂಗಳೂರಿನ ‘ನೃತ್ಯಾಂಗನ್’ ಸಂಸ್ಥೆಯ ನಿರ್ದೇಶಕಿಯಾದಂತಹ ರಾಧಿಕಾ ಶೆಟ್ಟಿಯವರ ಪರಿಕಲ್ಪನೆಯಲ್ಲಿ ಮೂಡಿಬಂದ ಈ ‘ನಾಟ್ಯದಾಸೋಹಂ’ ಪ್ರಾಯೋಜಿಸಿದವರು ಪುತ್ತೂರು ‘ನಾಟ್ಯರಂಗ’ದ ನಿರ್ದೇಶಕಿಯಾದ ಮಂಜುಳಾ ಸುಬ್ರಹ್ಮಣ್ಯ. ವಿವಿಧ ನೃತ್ಯ ಗುರುಗಳ, ನೃತ್ಯಕಲಾವಿದರ ಈ ಅಪರೂಪದ ಸಂಯೋಜನೆಯ ನೃತ್ಯ ಪ್ರದರ್ಶನ ನೋಡುಗರಿಗೆ ವಿಶೇಷ ಅನುಭವವನ್ನು ನೀಡಿತ್ತು. ಕಾರ್ಯಕ್ರಮದ ಬಳಿಕ ಸಚ್ಚಿದಾನಂದ ಭಾರತೀ ಶ್ರೀಗಳು ಕಲಾವಿದರುಗಳಿಗೆ ಅನುಗ್ರಹ ಫಲ ಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು.